

ಮಡಿಕೇರಿ: ನರ್ಬಾಡ್ ಬೆಂಗಳೂರು ಮತ್ತು ಮಡಿಕೇರಿ ಓ.ಡಿ.ಪಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜೀವನೋಪಾಯ, ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮಡಿಕೇರಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ, ಕುಶಾಲನಗರದ ೬೦ ಶಿಬಿರಾರ್ಥಿಗಳಿಗೆ ೧ ತಿಂಗಳ ಬ್ಯೂಟಿಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿಯ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಮಾತನಾಡಿ, ಇಂತಹ ತರಬೇತಿ ಶಿಬಿರಗಳು ಇಲ್ಲಿಗೆ ನಿಲ್ಲಬಾರದು. ತರಬೇತಿ ಪಡೆದವರು ಮನೆಯಲ್ಲಿ ಪಾರ್ಲರನ್ನು ಅಭ್ಯಾಸ ಮಾಡಿ, ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕಷ್ಟಪಟ್ಟು ದುಡಿದಲ್ಲಿ ನಿಮ್ಮ ಕನಸು ನನಸಾಗುತ್ತದೆ. ಆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಬ್ರೈಡಲ್ ಮೇಕಪ್ ಕುರಿತು ಚೆನ್ನಾಗಿ ಕಲಿತು, ಬ್ಯಾಂಕ್‌ನಿಂದ ಸಾಲ ಪಡೆದು ಬ್ಯೂಟಿಷಿಯನ್ ಶಾಪ್ ಆರಂಭಿಸಿ ನೆಮ್ಮದಿಯ ಜೀವನ ನಡೆಸಬೇಕು. ಬೇರೆಯವರಿಗೆ ಕೆಲಸವನ್ನು ನೀಡುದರೊಂದಿಗೆ ತಾವು ಮುಂದೆ ಬರಬೇಕೆಂದು ಕಿವಿ ಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್ ಮಾತನಾಡಿ, ಇಂದು ಮಹಿಳೆಯರು ಎಲ್ಲ ರಂಗದಲ್ಲಿಯೂ ಮುಂದೆ ಬಂದಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ ಎಂದ ಅವರು, ಇಲಾಖೆಯಿಂದ ಸಿಗುವ ಸಬ್ಸಿಡಿ ಸಾಲದ ಬಗ್ಗೆ ಮಾಹಿತಿ ನೀಡಿದರು.
ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್ ಮಾತನಾಡಿದರು. ಮೈಸೂರು ಓಡಿಪಿ ಸಂಸ್ಥೆಯ ಸಂಯೋಜಕಿ ಮೋಲಿ, ಲಲಿತ, ಕೊಡಗು ಜಿಲ್ಲಾ ಓಡಿಪಿ ವಲಯ ಸಂಯೋಜಕಿ ಜಾಯ್ಸಮೇನೆಜಸ್, ಕಾರ್ಯಕರ್ತೆಯರಾದ ವಿಜಯ, ಮಮತ, ತರಬೇತಿ ನೀಡಿದ ಶಿಕ್ಷಕರು, ಶಿವಿರಾರ್ಥಿಗಳು ಇತರರು ಪಾಲ್ಗೊಂಡಿದ್ದರು.