

ಕೊಡಗು : ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಹಿನ್ನೆಲೆಯಲ್ಲಿ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ವಿತರಣೆ ಕಾರ್ಯ ಬುಧವಾರದಿಂದ ಪ್ರಾರಂಭವಾಗಿದೆ.
ಶನಿವಾರಸಂತೆಯಲ್ಲಿ ಗ್ರಾಮ ಸಮಿತಿ, ವಾರ್ಡ್ ಸಮಿತಿ, ರಾಮಭಕ್ತರ ಸಮಿತಿ ರಚಿಸಲಾಗಿದೆ. ಈ ಎಲ್ಲ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿ ಮನೆಗೂ ಮಂತ್ರಾಕ್ಷತೆ ವಿತರಿಸಲಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೂ ಮಂತ್ರಾಕ್ಷತೆ ನೀಡಲಾಗುತ್ತಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾನ ದಿನದಂದು ಪ್ರತಿಯೊಬ್ಬರೂ ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಅಲ್ಲದೆ, ಕನಿಷ್ಠ ಐದು ದೀಪಗಳನ್ನು ಉತ್ತರದಿಕ್ಕಿಗೆ ಮುಖ ಮಾಡಿ ಹೊತ್ತಿಸಬೇಕು. ಅಲ್ಲದೆ, ಭಕ್ತರು ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಸಮಿತಿ ತಿಳಿಸಿದೆ.
ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಣೆ ಮಾಡುವ ಕಾರ್ಯದಲ್ಲಿ ಸಮಿತಿ ಕಾರ್ಯಕರ್ತರಾದ ಎಚ್.ಜಿ.ಆನಂದ್, ಕೆ.ಕೆ.ಕುಮಾರ್, ಪ್ರಶಾಂತ್, ಪುಷ್ಪಾ ಸುನೀಲ್, ಪ್ರಸಾದ್ ಕಳಲೆ, ಪ್ರಕಾಶ್, ಸತೀಶ್ ಪಾಲ್ಗೊಂಡಿದ್ದರು.