ಮೈಸೂರಿನ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

9
Published on

ಮೈಸೂರು: ಹೊಸ ವರ್ಷದ ಅಂಗವಾಗಿ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಭಕ್ತರಿಗೆ ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳನ್ನು ವಿತರಿಸಲಾಯಿತು.

ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಶ್ರೀರಂಗಂ ಕ್ಷೇತ್ರದಿಂದ ತರಿಸಿದ್ದ ತೋಮಾಲೆ ಮತ್ತು ಸ್ವರ್ಣ ಪುಷ್ಪದಿಂದ ಸಹಸ್ರನಾಮಾರ್ಚನೆ ಮಾಡಲಾಯಿತು. ಶ್ರೀ ಮಲಯಪ್ಪನ್ ಸ್ವಾಮಿ, ಪದ್ಮಾವತಿ, ಮಹಾಲಕ್ಷ್ಮೀ, ಉತ್ಸವ ಮೂರ್ತಿಗಳಿಗೆ ಏಕದಶ ಪ್ರಾಕಾರೋತ್ಸವ, 10 ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನ ಮಾಡಲು ಅನುವು ಮಾಡಿಕೊಡಲಾಯಿತು. ಭಕ್ತರು ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆಯುವುದರ ಜತೆಗೆ, ಲಡ್ಡು ಪ್ರಸಾದ ಸ್ವೀಕರಿಸಿದರು.

1994ರಲ್ಲಿ ಹೊಸ ವರ್ಷದ ಪ್ರಯುಕ್ತ ಮೊದಲ ಬಾರಿಗೆ ಭಕ್ತರಿಗೆ ಒಂದು ಸಾವಿರ ಲಡ್ಡು ವಿತರಿಸಲಾಗಿತ್ತು. ಬಳಿಕ ಅದನ್ನು ಪ್ರತಿವರ್ಷವೂ ಮುಂದುವರಿಸಿಕೊಂಡು ಬರಲಾಗಿದೆ. ಈ ಬಾರಿ 2 ಕೆ.ಜಿ. ತೂಕದ ಸುಮಾರು 15 ಸಾವಿರ ಲಡ್ಡು, 150 ಗ್ರಾಂ ತೂಕದ 2 ಲಕ್ಷ ಲಡ್ಡು ವಿತರಿಸಲಾಯಿತು.

ಲಡ್ಡು ತಯಾರಿಕೆಗೆ 100 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10 ಸಾವಿರ ಲೀಟರ್ ಖಾದ್ಯ ತೈಲ, 500 ಕೆ.ಜಿ. ಗೋಡಂಬಿ, 500 ಕೆ.ಜಿ. ಒಣದ್ರಾಕ್ಷಿ, 500 ಕೆ.ಜಿ ಬಾದಾಮಿ, 1 ಸಾವಿರ ಕೆ.ಜಿ. ಡೈಮಂಡ್ ಸಕ್ಕರೆ, 2 ಸಾವಿರ ಕೆ.ಜಿ. ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 50 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 50 ಕೆ.ಜಿ. ಪಚ್ಚ ಕರ್ಪೂರ, 200 ಕೆ.ಜಿ. ಲವಂಗ ಬಳಸಲಾಗಿತ್ತು. ಲಡ್ಡು ಪ್ರಸಾದ ಎಲ್ಲರಿಗೂ ದೊರೆಯಬೇಕು ಎನ್ನುವ ಉದ್ದೇಶದಿಂದ ಈ ಬಾರಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net