

ಕಂಪ್ಲಿ: ತಾಲೂಕಿನ ಉಪ್ಪಾರಹಳ್ಳಿ ಬಳಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ನಂ.2 ವಿತರಣಾ ನಾಲೆಯಿಂದ ಚಿನ್ನಾಪುರ, ದೇವಲಾಪುರ ಗ್ರಾಮಗಳಿಗೆ ಜೆಜೆಎಂ ಯೋಜನೆಯಡಿ ಪೈಪ್‌ಲೈನ್ ಮೂಲಕ ಕುಡಿವ ನೀರು ಹರಿಸುವ ಕಾಮಗಾರಿಯನ್ನು ರೈತರು ವಿರೋಧಿಸಿ ಶನಿವಾರ ತಡೆದರು.
ವಿತರಣಾ ನಾಲೆಯಿಂದ 20 ಎಚ್.ಪಿ.ಮೋಟಾರು ಅಳವಡಿಸಿ ನೀರು ಪಂಪ್ ಮಾಡಿ ಎರಡು ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಕಾಮಗಾರಿಗೆ ವಿರೋಧವಿದೆ. ಸದ್ಯ ನಂ.2 ವಿತರಣಾ ನಾಲೆ ವ್ಯಾಪ್ತಿಯ ಆಯಕಟ್ಟು ಮತ್ತು ಕಡೆಅಂಚಿನ ಭೂಮಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ವಿತರಣಾ ನಾಲೆಯಿಂದ ಕುಡಿವ ನೀರಿಗಾಗಿ ಬಳಕೆ ಮಾಡಿದಲ್ಲಿ ದೇವಲಾಪುರ, ದೇವಸಮುದ್ರ, ಜವುಕು, ಮೆಟ್ರಿ ವ್ಯಾಪ್ತಿಯ ಸಾವಿರಾರು ಎಕರೆ ಭತ್ತದ ಬೆಳೆಗೆ ನೀರು ತಲುಪದೆ ಇನ್ನಷ್ಟು ಸಂಕಷ್ಟ ಎದುರಾಗುತ್ತದೆ.
ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟ ಎರಡು ತಿಂಗಳ ನಂತರ ನಂ.2ವಿತರಣಾ ನಾಲೆಗೆ ನೀರು ಬರುತ್ತದೆ. ಆದ್ದರಿಂದ ಜೆಜೆಎಂ ಯೋಜನೆಯಡಿ ವಿತರಣಾ ನಾಲೆಯಿಂದ ನೀರು ಒಯ್ಯಬಾರದು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಅನುಮತಿ ನೀಡಬಾರದು ಎಂದು ರೈತರಾದ ಎಚ್.ಓಂಕಾರರೆಡ್ಡಿ, ಎಂ.ಜಡೆಪ್ಪ, ಡಿ.ಜಡೆಪ್ಪ, ಜಿ.ಲಿಂಗಾರೆಡ್ಡಿ, ಎಂ.ತಿಪ್ಪಾರೆಡ್ಡಿ, ಡಿ.ರಾಜಪ್ಪ, ಎನ್.ಪಾಲಾಕ್ಷರೆಡ್ಡಿ, ರಾಮಲಿಂಗಪ್ಪ ಸೇರಿ ಇತರರು ಒತ್ತಾಯಿಸಿದರು.