

ಉಡುಪಿ: ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಆತ್ಮಸ್ಥೆ$ರ್ಯದಿಂದ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಾರಿ ಸುಮಾರು 63 ಲಕ್ಷ ರೂ. ವೆಚ್ಚದಲ್ಲಿ 609 ಫಲಾನುಭವಿಗಳಿಗೆ 962 ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ದೇಶದಾದ್ಯಂತ 51 ಕೋಟಿ ರೂ. ವೆಚ್ಚದಲ್ಲಿ ಸಾಧನಾ ಸಲಕರಣೆಗಳನ್ನು ಹಂಚಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಅಲಿಂಕೋ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ ಆಯ್ಕೆ ಮಾಡಲಾದ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ವಿವಿಧ ಸಾಧನ ಸಲಕರಣೆಗಳ ವಿತರಿಸಿ ಮಾತನಾಡಿದರು.
ಗುಣಮಟ್ಟದ ಸಲಕರಣೆಗಳನ್ನು ದೊರಕುವಂತೆ ಮಾಡಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಅಂಗವಿಕಲರು ಸಲಕರಣೆಗಳ ಉಪಯೋಗ ಪಡೆದುಕೊಳ್ಳಬೇಕು. ಸಲಕರಣೆಗಳ ದುರಸ್ಥಿಗೆ ಅನುಕೂಲವಾಗುವಂತೆ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ದುರಸ್ತಿ ಕೇಂದ್ರವನ್ನು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿರುವ ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ಮೌಲ್ಯಮಾಪನ ಮಾಡಿ, ಸಲಕರಣೆಯನ್ನು ವಿತರಿಸಲಾಗಿದ್ದು, ಇದರಿಂದ ಅವರು ಘನತೆಯಿಂದ ಸ್ವತಂತ್ರವಾಗಿ ಸಮಾಜದಲ್ಲಿ ಜೀವಿಸಲು ಸಾಧ್ಯವಾಗುತ್ತದೆ. ಸಲಕರಣೆಗಳ ಸಣ್ಣ-ಪುಟ್ಟ ದುರಸ್ಥಿಯನ್ನು ಅಲಿಂಕೋ ಸಂಸ್ಥೆಯ ವತಿಯಿಂದಲೇ ಮಾಡಲಾಗುವುದು ಎಂದರು.
ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನು ಆಲಿಸಿ, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯವನ್ನು ತಲುಪಿಸುವ ಕೆಲಸವನ್ನು ಅಲಿಂಕೋ ಸಂಸ್ಥೆಯು ಪರಿಣಾಮಕಾರಿಯಾಗಿ ಮಾಡಿದೆ. ಸೌಲಭ್ಯ ಪಡೆದ ಫಲಾನುಭವಿಗಳು ಉತ್ತಮ ಜೀವನವನ್ನು ನಡೆಸುವಂತಾಗಲಿ ಎಂದರು.
ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಶ್ರವಣ ಸಾಧನ, ವ್ಹೀಲ್ ಚೇರ್, ಸ್ಮಾರ್ಟ್ಫೋನ್, ಸೇರಿದಂತೆ ಸಾಧನ ಸಲಕರಣೆಯನ್ನು ವಿತರಿಸಲಾಯಿತು. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಎಎಸ್ಪಿ ಸಿದ್ದಲಿಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನಾ ಮತ್ತಿತರರು ಉಪಸ್ಥಿತರಿದ್ದರು.
ಸೀನಿಯರ್ ಮ್ಯಾನೆಜರ್ ಮತ್ತು ಅಲಿಂಕೋ ಸಂಸ್ಥೆಯ ಯೂನಿಕ್ ಎಡ್ ಎ.ವಿ. ಅಶೋಕ್ ಕುಮಾರ್ ಸ್ವಾಗತಿಸಿ, ಗಣನಾಥ ಎಕ್ಕಾರು ಹಾಗೂ ದೀಪಾ ನಿರೂಪಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ವಂದಿಸಿದರು.