

ಬೇಲೂರು: ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಸರಿಯಾಗಿ ವಿತರಿಸದೆ ಸರ್ಕಾರ ಅವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ರೈತ ಸಂಘದ ಕಾರ್ಯಕರ್ತರು ಗುರುವಾರ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಲಾಕ್‌ಡೌನ್‌ನಿದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕಿತ್ತು. ಆದರೆ ಎಕರೆಗೆ 5 ಕೆಜಿ ಮುಸುಕಿನ ಜೋಳ ವಿತರಿಸುತ್ತಿದ್ದು, ಇದು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಕಿಡಿಕಾರಿದರು.
ಉಪಯೋಗವಿಲ್ಲದ್ದನ್ನು ಮಾರಾಟಕ್ಕೆ ಅವಕಾಶ ಕೊಟ್ಟಿರುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳು ವಿತರಿಸಬೇಕು. ಇಲ್ಲದಿದ್ದಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ, ಎಲ್ಲ ಸೌಲಭ್ಯವನ್ನು ರೈತರಿಗೆ ಪ್ರಾಮಾಣಿಕವಾಗಿ ವಿತರಿಸಲಾಗುತ್ತಿದೆ. ಜೋಳದ ಜತೆ ದ್ವಿದಳ ಧಾನ್ಯಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶದಿಂದ ಎಕರೆಗೆ ಒಂದು ಬ್ಯಾಗ್ ಬಿತ್ತನೆ ಜೋಳ ವಿತ್ತರಿಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಬಸವರಾಜು ಮುಖಂಡರಾದ ರಂಗನಾಥ್, ಬಸವೇಗೌಡ, ಮೊಕ್ಷರಾಜ್, ಮಲ್ಲಿಕಾರ್ಜುನ್ ಇತರರಿದ್ದರು.