ಆ.15 ರೊಳಗೆ ಶಾಲೆ ಮಕ್ಕಳಿಗೆ ಶೂ ವಿತರಿಸಿ; ಸಿಇಒ ರಾಹುಲ್ ಶಿಂಧೆ ಸೂಚನೆ

ceo rahul shindhe MEETING
ವಿಜಯಪುರ ಜಿಪಂ ಸಭಾಂಗಣದಲ್ಲಿ ಸಿಇಒ ರಾಹುಲ್ ಶಿಂಧೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ವಿಜಯಕುಮಾರ ಆಜೂರ, ನಿಂಗಪ್ಪ ಗೋಠೆ, ರಾಮಣ್ಣ ಅಥಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ ಮಕ್ಕಳಿಗೆ ಆ. 15 ರೊಳಗೆ ಕಡ್ಡಾಯವಾಗಿ ಶೂ ವಿತರಿಸುವಂತೆ ಜಿಪಂ ಸಿಇಒ ರಾಹುಲ್ ಶಿಂಧೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಆಗಸ್ಟ್ 15 ರೊಳಗೆ ಶೂ ವಿತರಣೆ ಮಾಡದೇ ಇದ್ದಲ್ಲಿ ಸಂಬಂಧಿಸಿದ ಶಾಲೆ ಮುಖ್ಯ ಗುರು, ಬಿಆರ್‌ಪಿ, ಸಿಆರ್‌ಪಿ ವಿರುದ್ಧ ಕ್ರಮ ಕೈಗೊಳ್ಳಲು ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚನೆ ನೀಡಿದರು.

ಕಳೆದ ವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೆ ಬೆಂಚ್ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಲಾಗಿತ್ತು. ಅದರನ್ವಯ ಒಂದೇ ವಾರದಲ್ಲಿ 40ಕ್ಕೂ ಅಧಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಂದ ಉಪಯೋಗಿಸದೇ ಉಳಿದಿರುವ 1000ಕ್ಕೂ ಹೆಚ್ಚು ಬೆಂಚ್ ಗಳನ್ನು ಅವಶ್ಯಕತೆ ಇರುವ ಶಾಲೆಗಳಿಗೆ ಹಸ್ತಾಂತರ ಮಾಡಲಾಗಿದೆ. ಇದರಿಂದ 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. 60 ಗ್ರಾಮ ಪಂಚಾಯಿತಿಗಳಿಂದ ಸುಮಾರು 230 ಅಂಗನವಾಡಿಗಳಿಗೆ ಚಿಕ್ಕದಾದ ಬೆಂಚ್ ಗಳನ್ನು ಮತ್ತು ಚಿಕ್ಕ ಮಕ್ಕಳಿಗೆ ಅನುಕೂಲವಾಗುವ ಕುರ್ಚಿಗಳನ್ನು ಒದಗಿಸಿದೆ. ಇನ್ನೂ ಬೆಂಚ್ ಗಳ ಬೇಡಿಕೆಯಿರುವ ಶಾಲೆಗಳನ್ನು ಗುರುತಿಸಿ ಆ ಶಾಲೆಗಳಿಗೆ ಬೆಂಚ್ ಪೂರೈಸುವ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಮೂರನೇ ಶನಿವಾರ ಎಲ್ಲ ಅಂಗನವಾಡಿಗಳಲ್ಲಿ ಹಾಗೂ ನಾಲ್ಕನೇ ಶನಿವಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪಾಲಕರ ಸಭೆ ಆಯೋಜಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಸಹಭಾಗಿತ್ವ ಇರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎನ್.ಎಚ್. ನಾಗೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net