

ಹಾವೇರಿ: ಮುಂಗಾರು ಬಿತ್ತನೆಗೆ ರೈತರಿಗೆ ಅಗತ್ಯ ಬೀಜ-ಗೊಬ್ಬರ ವಿತರಣೆಯಲ್ಲಿ ಯಾವುದೇ ಗೊಂದಲ, ತೊಂದರೆ ಉಂಟಾಗದಂತೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮ ವಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಹಂಚಿಕೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಯಾವುದೇ ಕೊರತೆ ಉಂಟಾಗಬಾರದು ಎಂದು ತಿಳಿಸಿದರು.
ರಿಯಾಯಿತಿ ದರದಲ್ಲಿ ನೀಡುವ ಬೀಜಗಳ ಪ್ಯಾಕೇಟ್ ಮೇಲೆ ಕ್ಯೂಆರ್ ಕೋಡ್ ನಮೂದಿಸಿರುವುದನ್ನು ಖಾತ್ರಿಪಡಿಸಿಕೊಂಡು ನಂತರ ದಾಸ್ತಾನಿಕರಿಸಬೇಕು. ಬೀಜ ವಿತರಣೆ ವೇಳೆ ಪ್ರತಿ ಪ್ಯಾಕೇಟ್ ಅನ್ನು ಸ್ಕ್ಯಾನ್ಯ್ ಮಾಡಿ,Seed MIS ನಲ್ಲಿ QR Code ಮತ್ತು ಇತರೆ ವಿವರಗಳು ದಾಖಲಾದ ನಂತರ ಬೀಜ ವಿತರಿಸಬೇಕು. ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ.
ಈ ಪೈಕಿ ಗೋವಿನಜೋಳ 2,04,689 ಹೆಕ್ಟೇರ್, ಹತ್ತಿ 46,702 ಹೆಕ್ಟೇರ್, ಭತ್ತ 33,715 ಹೆಕ್ಟೇರ್, ಶೇಂಗಾ 19,519 ಹೆಕ್ಟೇರ್, ಸೋಯಾಬೀನ್ 14,401 ಹೆಕ್ಟೇರ್, ಕಬ್ಬು 8,416 ಹೆಕ್ಟೇರ್, ಹೆಸರು 567 ಹೆಕ್ಟೇರ್ ಹಾಗೂ 2,438 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲೆಯ ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕಂಪನಿ ಪ್ರತಿನಿಧಿಗಳು ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ 12,000 ಕ್ವಿಂಟಾಲ್, ಹತ್ತಿ 5,000 ಕ್ವಿಂಟಾಲ್, ಶೇಂಗಾ 3,200 ಕ್ವಿಂಟಾಲ್, ಸೋಯಾಬೀನ್ 14,000 ಕ್ವಿಂಟಾಲ್, ತೊಗರಿ 900 ಕ್ವಿಂಟಾಲ್, ಜೋಳ 100 ಕ್ವಿಂಟಾಲ್, ಹೆಸರು 400 ಕ್ವಿಂಟಾಲ್ ಹಾಗೂ ಸೂರ್ಯಕಾಂತಿ 50 ಕ್ವಿಂಟಾಲ್ ಸೇರಿ 35,660 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ.
ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳು, 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ 21 ಹೆಚ್ಚುವರಿ ಕೇಂದ್ರಗಳು ಸೇರಿ ಒಟ್ಟಾರೆ 53 ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯ್ತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೀಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ 60 ಬಾರ್ ಕೋಡ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ ಎಂದು ಚೇತನಾ ಪಾಟೀಲ ಮಾಹಿತಿ ನೀಡಿದರು.
ಮುಂಗಾರು ಹಂಗಾಮಿಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಗೆ ಯೂರಿಯಾ, ಡಿಎಪಿ, ಎಂಒಪಿ ಕಾಂಪ್ಲೆಕ್ಸ್, ಎಸ್‌ಎಸ್‌ಪಿ ಸೇರಿದಂತೆ 1,19,364 ಮೆ. ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಮೇವರೆಗೆ 37,166 ಮೆಟ್ರಿಕ್ ಪೂರೈಕೆಯಾಗಿದೆ. ಬಫರ್ ಹಾಗೂ ಹಳೆಯ ದಾಸ್ತಾನು ಸೇರಿದಂತೆ 66,689 ಮೆ.ಟನ್ ಗೊಬ್ಬರ ದಾಸ್ತಾನಿದ್ದು, 22,418 ಮೆ.ಟನ್ ಹಂಚಿಕೆ ಮಾಡಲಾಗಿದೆ. 44,271 ಮೆ.ಟನ್ ದಾಸ್ತಾನಿದೆ. ಜೂನ್ ತಿಂಗಳಲ್ಲಿ 23,169 ಮೆ.ಟನ್ ಹಂಚಿಕೆ ಆಗಿದೆ. ಮುಂಗಾರು ಹಂಗಾಮು ಮುಕ್ತಾಯವಾಗುವ ಸೆಪ್ಟೆಂಬರ್‌ವರೆಗೆ ರಸಗೊಬ್ಬರ ಪೂರೈಕೆಯಾಗಲಿದೆ. ಯಾವುದೇ ಗೊಬ್ಬರದ ಕೊರತೆ ಇರುವುದಿಲ್ಲ ಎಂದು ಚೇತನಾ ಪಾಟೀಲ ವಿವರಿಸಿದರು.