ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ

BLY- 20-4
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಶುಕ್ರವಾರ ಬಳ್ಳಾರಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on

ಬಳ್ಳಾರಿ : ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರಾಜ್ಯದಲ್ಲಿ ಬಡ ರೈತರು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಾ ತಮ್ಮದೆ ರೀತಿಯಲ್ಲಿ ಈ ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಇಷ್ಟು ವರ್ಷ ಇಲ್ಲಿ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ರೈತರ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ರೈತರು ತಮ್ಮ ಭೂಮಿಗಾಗಿ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವುದು ಅನಿವಾರ್ಯವಾಗಿದೆ ಎಂದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರ ಮಾಡುವನಿಟ್ಟಿನಲ್ಲಿ ಯಾವುದೇ ರೀತಿಯ ಕಾರ್ಯಕೈಗೊಳ್ಳುವ ಬದಲು ಅವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ರಾಜ್ಯದ 12 ಲಕ್ಷ ಬಗರ್‌ಹುಕುಂ ಸಾಗುವಳಿದಾರರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ನಾವು ಒಂದಾದರೆ ಸರ್ಕಾರವನ್ನೇ ನಡುಗಿಸುವ ಶಕ್ತಿ ನಮಗಿದೆ. ಜೊತೆಗೆ ವಿದ್ಯುತ್ ಸಹ ಇಂದು ರೈತರಿಗೆ ಏಳು ಗಂಟೆ ಕೊಡುವುದನ್ನು ಐದು ತಾಸಿಗೆ ಇಳಿಸಿ, ಅದನ್ನು ಸರಿಯಾಗಿ ಕೊಡದಂತೆ ಮಾಡಿದ್ದಾರೆ. ರಾತ್ರಿಯ ಬದಲು ಹಗಲಿನಲ್ಲಿ ಕರೆಂಟ್ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ , ಜಿಲ್ಲಾ ಸಮಿತಿ ಸದಸ್ಯರಾದ ನಿಂಗಪ್ಪ, ಗಾದಿಲಿಂಗ, ಮಲ್ಲಪ್ಪ, ಧನರಾಜ್, ಕಾವಲಿ ಬಸವರಾಜ್, ತಿಪ್ಪಯ್ಯ, ಓಬಳೇಶ್, ಪೂಜಾರಿ ಪಂಪಾ, ರೈತರಾದ ರಾಮದಾಸ, ಮತ್ತಿ ಬಸಣ್ಣ, ಸಣ್ಣ ಹನುಮಂತ, ಯಾಳ್ಪಿ ಹನುಮಂತ, ಗೋಡೆಹಾಳ್ ಬಸವರಾಜ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net