ಮಾನವೀಯ ದೃಷ್ಟಿಯಲ್ಲಿ ಪರಿಹಾರ ವಿತರಿಸಿ

TKE mla
ಅಜ್ಜಂಪುರ ಪರ್ವತರಾಯನ ಕೆರೆಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಬಾಗಿನ ಸಮರ್ಪಿಸಿದರು. ಕೆ.ನಟರಾಜ್, ಎನ್.ದಯಾನಂದ್, ಜೋಗಿ ಪ್ರಕಾಶ್, ಶಿವಶರಣಪ್ಪ ಕಟ್ಟೋಳಿ, ಸುನಂದಮ್ಮ, ನೀಲಾಂಬಿಕೆ ಇತರರಿದ್ದರು.
Published on

ತರೀಕೆರೆ: ಅನಧಿಕೃತ ಮನೆಗಳಿಗೆ ಹಾನಿಯಾದರೂ 2 ಲಕ್ಷ ರೂ. ಪರಿಹಾರ ಕೊಡಲು ಸಚಿವ ಸಂಪುಟ ತೀರ್ಮಾನಿಸಿದೆ. ಆದ್ದರಿಂದ ಅಧಿಕಾರಿಗಳು ಮನೆಹಾನಿ ಸಂತ್ರಸ್ತರಿಗೆ ಸಹಾನುಭೂತಿಯಿಂದ ಪರಿಹಾರ ಕೊಡಿಸಲು ಪ್ರಯತ್ನಿಸಬೇಕು ಎಂದು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಅವರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಅಜ್ಜಂಪುರ ಪರ್ವತರಾಯನ ಕೆರೆ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಾಗಿನ ಸಮರ್ಪಿಸಿ ಮಾತನಾಡಿ, ಅತಿವೃಷ್ಟಿಯಿಂದ ನಾಗವಂಗಲ, ಬಗ್ಗವಳ್ಳಿ ಸೇರಿ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಮನೆ ಗೋಡೆ ಕುಸಿದಿರುವುದು, ಸಾಕಷ್ಟು ಮನೆಗಳಿಗೆ ಮಳೆ ನೀರು ನುಗ್ಗಿದೆ. ವಿವಿಧೆಡೆ ಗ್ರಾಮೀಣಾಭಿವೃದ್ಧಿ ಹಾಗೂ ಪಿಡಬ್ಲುೃಡಿ ರಸ್ತೆಗಳು ಹಾಳಾಗಿದ್ದು, ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಾನಿಗೀಡಾದ ಮನೆಗಳನ್ನು ಪರಿಶೀಲಿಸಲಾಗಿದ್ದು, ತಾತ್ಕಾಲಿಕ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಧಿಕ ಮಳೆಯಿಂದ ಅಜ್ಜಂಪುರ ಭಾಗದಲ್ಲಿ ಈರುಳ್ಳಿ, ತರೀಕೆರೆ ಭಾಗದಲ್ಲಿ ವೀಳ್ಯೆದೆಲೆಗೆ ಹಾನಿಯಾಗಿರುವ ವರದಿ ಪಡೆಯಲಾಗಿದೆ. ಹಾನಿಯಾದ ಪ್ರದೇಶಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ಕೈಗೊಂಡಿದ್ದು, ಬೆಳೆ ಹಾನಿಗೆ ಪರಿಹಾರ ನೀಡಲು ಬೇಕಾದ ಕ್ರಮಕೈಗೊಳ್ಳಲಾಗಿದೆ. ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆ ಅನುಷ್ಟಾನವಾದ್ದರಿಂದ ಜಂಬದಹಳ್ಳ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಈ ನೀರು 12 ಸಾವಿರ ಎಕರೆ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಕೆ.ನಟರಾಜ್ ಮಾತನಾಡಿ, ಹದಿನೈದು ದಿನಗಳ ಹಿಂದೆ ಬತ್ತಿದ್ದ ಪರ್ವತರಾಯನ ಕೆರೆ ಪ್ರಕೃತಿಯ ಕೃಪೆಯಿಂದ ಸಮೃದ್ಧವಾಗಿ ತುಂಬಿ ಹರಿದಿದೆ. ಇದು ತಾಲೂಕಿಗೆ ಶುಭ ಸೂಚನೆ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ದಯಾನಂದ್, ಬಗರ್ ಹುಕುಂ ಸಮಿತಿ ಸದಸ್ಯ ಜೋಗಿ ಪ್ರಕಾಶ್, ಪಪಂ ಮಾಜಿ ಅಧ್ಯಕ್ಷೆ ಚೆನ್ನಬಸಮ್ಮ, ಉಪಾಧ್ಯಕ್ಷೆ ಸುನಂದಮ್ಮ, ಗ್ರಾಪಂ ಅಧ್ಯಕ್ಷೆ ನೀಲಾಂಬಿಕೆ, ಪ್ರಮುಖರಾದ ತಿಪ್ಪೇಶ್, ನಯಾಜ್, ಮಸೂದ್ ಅಹಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net