ವಿದ್ಯಾರ್ಥಿಗಳ ಪ್ರಗತಿ ಅರಿಯುವ ಎಫ್‌ಎ-1 ಪರೀಕ್ಷೆ

30ark3
ಅರಕಲಗೂಡು ತಾಲೂಕು ಮೋಕಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಫ್‌ಎ1 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಸ್ಸೆಸ್ಸೆಲ್ಸಿ, 7ನೇ ತರಗತಿ ಟಾಪ್ 10 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಪಿ.ನಾರಾಯಣ, ಬೋರಣ್ಣಗೌಡ, ಕೊಟ್ಟೂರಪ್ಪ, ಯೋಗೇಶ್ ಇತರರಿದ್ದರು.
Published on

ಅರಕಲಗೂಡು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುವ ಸಲುವಾಗಿ ವಿದ್ಯಾರ್ಥಿಗಳ ಪ್ರಗತಿ ಅರಿಯುವ ಹಿನ್ನೆಲೆಯಲ್ಲಿ ಎಲ್ಲ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಏಕಕಾಲಕ್ಕೆ ಎಫ್‌ಎ-1 ಫಲಿತಾಂಶವನ್ನು ಪ್ರಕಟಿಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ತಿಳಿಸಿದರು.

ತಾಲೂಕಿನ ಮೋಕಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಎಫ್‌ಎ1 ಪರೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನ ಪಡೆದುಕೊಂಡ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಕ್ಕಳ ಕಲಿಕೆಯ ಆಧಾರದ ಮೇಲೆ 6 ತಂಡಗಳನ್ನಾಗಿ ರಚಿಸಿ, ಈ ಆರು ತಂಡಗಳ ಮಕ್ಕಳು ಗಳಿಸಿರುವ ಎಫ್‌ಎ-1 ಅಂಕಗಳನ್ನು ಕೂಡಿ ಯಾವ ತಂಡ ಅಧಿಕ ಅಂಗಳನ್ನು ಗಳಸಿದೆಯೋ ಆ ತಂಡಕ್ಕೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮ 58 ಪ್ರೌಢಶಾಲೆಗಳು ಮತ್ತು 112 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಏಕಕಾಲಕ್ಕೆ ಟಾಪ್ 10 ಮಕ್ಕಳನ್ನು ಗುರುತಿಸಿ ಬಹುಮಾನ ನೀಡಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಬೆನ್ನುತಟ್ಟುವ ಕಾರ್ಯ ಕೈಗೊಳ್ಳಲಾಗಿದೆ. ಇದರಲ್ಲಿ ಎಸ್ಸೆಸ್ಸೆಲ್ಸಿ ಮತ್ತು 7ನೇತರಗತಿಯ ಮಕ್ಕಳು ಸೇರಿದ್ದಾರೆ. ನಮ್ಮ ಶೈಕ್ಷಣಿಕ ಬುನಾದಿಯೇ ಪ್ರಾಥಮಿಕ ಶಿಕ್ಷಣವಾಗಿದೆ. 1ರಿಂದ 7ನೇ ತರಗತಿವರೆಗೆ ಮಕ್ಕಳ ಕಲಿಕೆಯನ್ನು ಆರಂಭಿಕ ಹಂತದಲ್ಲಿ ಉತ್ತೇಜಿಸಿದರೆ ಅದು ಪ್ರೌಢಶಾಲಾ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಸಹಕಾರಿಯಾಗಲಿದೆ ಎಂಬ ಸದುದ್ದೇಶದಿಂದ ಈ ಬಾರಿ ಪ್ರಾಥಮಿಕ ಶಾಲೆಗಳಲ್ಲಿಯೂ ಎಫ್‌ಎ1 ಫಲಿತಾಂಶಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಎಲ್ಲ ಶಾಲೆಗಳಲ್ಲಿ ಏಕಕಾಲಕ್ಕೆ ತಾಯಂದಿರ ಸಭೆಯನ್ನು ಸಹ ಆಯೋಜನೆ ಮಾಡಲಾಗಿದೆ. ಮಕ್ಕಳ ತಾಯಂದಿರು ತಪ್ಪದೆ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಬಹುದಾಗಿದೆ. ಇದು ಮಕ್ಕಳ ಕಾರ್ಯಚಟುವಟಿಕೆಗಳನ್ನು ಶಿಕ್ಷಕರ ಸಮ್ಮುಖದಲ್ಲಿ ಸಮಾಲೋಚನೆ ಮಾಡಲು ಸುವರ್ಣ ಅವಕಾಶವಾಗಿದೆ. ಈ ಸಭೆಯೂ ಮಕ್ಕಳ ಶೈಕ್ಷಣಿಕ ಪ್ರಗತಿಯ ಮುತುವರ್ಜಿಯಾಗಿದೆ. ಹಾಗೆಯೇ ತಾಲೂಕಿನಾದ್ಯಂತ ಎಲ್ಲ ಮಕ್ಕಳ ಮನೆ ಭೇಟಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು, ಅಧಿಕಾರಿಗಳು ತಮ್ಮ ಮನೆಗೆ ಬಂದು ಮಕ್ಕಳ ಶಿಕ್ಷಣ ಕಲಿಕೆಯ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದರು.

ಕಳೆದ ಸಾಲಿನಲ್ಲಿ ಶಾಸಕ ಎ.ಮಂಜು ಹಾಗೂ ನಮ್ಮ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಜತೆಗೂಡಿ ರಾತ್ರಿ ವೇಳೆ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗಳಿಗೆ ಭೇಟಿ ನೀಡಿದ ಪರಿಣಾಮವಾಗಿ ತಾಲೂಕು ಜಿಲ್ಲೆಯಲ್ಲಿಯೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 4ನೇ ಸ್ಥಾನ ಪಡೆಯಲು ಸಾಧ್ಯವಾಯಿತು. ಈ ಬಾರಿ ಟಾಪ್-3 ಒಳಗೆ ಫಲಿತಾಂಶ ಪಡೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹೀಗಾಗಿ ಎಫ್‌ಎ1 ಫಲಿತಾಂಶದಿಂದಲೇ ಮನೆ ಭೇಟಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಪಾಲಕರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮುಖ್ಯಶಿಕ್ಷಕರಾದ ಬೋರಣ್ಣಗೌಡ, ಕೊಟ್ಟೂರಪ್ಪ, ಇಸಿಒ ಯೋಗೇಶ್, ಸಹ ಶಿಕ್ಷಕರಾದ ಅನಿಲ್, ವಿಶ್ವನಾಥ್, ಪುರುಷೋತ್ತಮ, ಗೌತಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net