

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿದ್ಯಾರ್ಥಿಗಳು ನಿರಂತರ ಓದು ಹಾಗೂ ಕಠಿಣ ಪರಿಶ್ರಮದಿಂದ ಜೀವನದಲ್ಲಿ ನಿಶ್ಚಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ತಿಳಿಸಿದರು.
ಅನುಗೊಂಡನಹಳ್ಳಿ ಹೋಬಳಿ ಸಮೇತನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಡ ಮಧ್ಯಮ ವರ್ಗದ ಕುಟುಂಬದವರಾಗಿದ್ದು ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗುವಂತೆ ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಅಗತ್ಯವಾದ ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ ಶೈಕ್ಷಣಿಕ ದಿನ ಪತ್ರಿಕೆ ಹಾಗೂ ಕಲಿಕಾ ಸಾಮಗ್ರಿಗಳನ್ನ ವಿತರಣೆ ಮಾಡಲಾಗುತ್ತಿದೆ. ದಾನಿಗಳು ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಕಠಿಣ ಶ್ರಮವಹಿಸಿ ಜ್ಞಾನಾರ್ಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು.
ಸಮಾಜ ಕಾರ್ಯಕ್ಕೆ ಶ್ಲಾಘನೆ:
ಸಮಾಜದ ಓರೆ ಕೋರೆಗಳನ್ನು ತಿದ್ದುವಂತಹ ಪತ್ರಕರ್ತರು ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಪ್ರಶಂಸನಿಯ ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕ ಭಾಷಾ ಹೇಳಿದರು. ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಪೂರಕವಾಗುವಂತಹ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರ ಶೈಕ್ಷಣಿಕ ದಿನ ಪತ್ರಿಕೆ ಹಾಗೂ ಕಲಿಕಾ ಸಾಮಗ್ರಿಗಳನ್ನ ವಿತರಣೆ ಮಾಡಿ ಬದ್ಧತೆ ಮೆರೆದಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಲಿತಾಂಶ ನೀಡುವ ಮುಖಾಂತರ ಅಭಿನಂದಿಸಬೇಕು ಎಂದರು.
ಅಳಿಲು ಸೇವೆ:
ಪತ್ರಕರ್ತರು ತಮ್ಮ ವೈಯಕ್ತಿಕ ಹಣದಿಂದ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಶೈಕ್ಷಣಿಕ ಸಾಮಗ್ರಿಗಳನ್ನ ವಿತರಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡರೆ ನಮ್ಮ ಅಳಿಲು ಸೇವೆಗೆ ಸಾರ್ಥಕತೆ ಬರುತ್ತದೆ. ಎಸ್.ಸಿ ಮಂಜುನಾಥ. ಅಧ್ಯಕ್ಷ, ಹೊಸಕೋಟೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಸ್.ಸಿ.ಮಂಜುನಾಥ್ ತಿಳಿಸಿದರು.