ರೈತರಿಗೆ ಮಧ್ಯಂತರ ಪರಿಹಾರ ವಿತರಿಸಲಿ: ಬಿ.ವೈ.ರಾಘವೇಂದ್ರ

b y raghavendra
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on

ಶಿವಮೊಗ್ಗ: ರಾಜ್ಯದ 160ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ಎದುರಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ತಕ್ಷಣವೇ ಮಧ್ಯಂತರ ಪರಿಹರ ಘೋಷಣೆ ಮಾಡಬೇಕು. ಜತೆಗೆ ಪೂರ್ಣ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40-50 ವರ್ಷದ ಹಿಂದೆ ಈ ರೀತಿಯ ಬರಗಾಲ ಎದುರಾಗಿತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಈ ಬಾರಿ ಜನರು ಕೂಡ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಕುಡಿಯುವ ನೀರಿನ ಅಭಾವ ಉಂಟಾಗಬಹುದು. ಜಾನುವಾರುಗಳಿಗೂ ನೀರಿನ ಹಾಹಾಕಾರ ಸೃಷ್ಟಿ ಆಗಬಹುದು. ಈ ಎಲ್ಲ ದೃಷ್ಟಿಯಿಂದ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಆನಂತರ ಕೇಂದ್ರ ಸರ್ಕಾರ ತನ್ನ ಪಾಲಿನ ಕೆಲಸವನ್ನು 100ಕ್ಕೆ ನೂರರಷ್ಟು ಮಾಡುತ್ತಿದೆ. ಈ ವಿಚಾರ ಕೇಂದ್ರದ ಗಮನದಲ್ಲಿದ್ದು ಯಾವುದೇ ಅನುಮಾನ ಬೇಡ ಎಂದರು.
ಕಳೆದೊಂದು ತಿಂಗಳಿಂದ ಬರ ಘೋಷಣೆ ಪ್ರಕ್ರಿಯೆಯಲ್ಲಿ ಸರ್ಕಾರ ಕಾಲಹರಣ ಮಾಡಿದೆ. ಕೃಷಿ ಸಚಿವರು ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ರೀತಿಯ ಟೀಕೆಗಳನ್ನು ಬಿಟ್ಟು ರಾಜ್ಯ ಸರ್ಕಾರ ಪರಿಹಾರ ವಿತರಣೆಗೆ ಮುಂದಾಗಬೇಕು. ಇಲ್ಲವಾದರೆ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net