

ಹಾನಗಲ್ಲ: ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ನಿರ್ವಿುಸಲಾಗುತ್ತಿರುವ 230 ಮನೆಗಳನ್ನು 3 ತಿಂಗಳ ಒಳಗೆ ನಿರ್ವಿುಸಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಶಾಸಕ ಶ್ರೀನಿವಾಸ ಮಾನೆ ಮಂಡಳಿಯ ಕಿರಿಯ ಇಂಜಿನಿಯರ್ ಸಿದ್ಧಾರ್ಥ ಅವರಿಗೆ ಸೂಚಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಶಾಸಕ ಮಾನೆ, ಮಂಡಳಿಯಿಂದ ನಿವೇಶನ ಹಕ್ಕುಪತ್ರ ನೀಡಲು ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಂಜಿನಿಯರ್ ಸಿದ್ಧಾರ್ಥ ಸಮರ್ಪಕ ಉತ್ತರ ನೀಡದಿದ್ದಾಗ, ಅನಗತ್ಯವಾಗಿ ವಿಳಂಬ ಮಾಡದೇ ತಕ್ಷಣ ಫಲಾನುಭವಿಗಳಿಂದ ಡಿಡಿ, ಅಗತ್ಯ ದಾಖಲೆ ಪಡೆದು ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕ ನೀರಾವರಿ ನಿಗಮದಿಂದ ರೂ. 4.9 ಕೋಟಿ ವೆಚ್ಚದಲ್ಲಿ ಸಿಸಿ ಗಟಾರ ಹಾಗೂ ಡಾಂಬರ್ ರಸ್ತೆ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಇದುವರೆಗೂ ಆರಂಭಿಸದ ಗುತ್ತಿಗೆದಾರರಿಗೆ ತಕ್ಷಣ ನೋಟಿಸ್ ನೀಡಿ ಎಂದು ಇಲಾಖೆಯ ಎಇಇ ಪ್ರಹ್ಲಾದ್ ಅವರಿಗೆ ಸೂಚಿಸಿದರು.
ವಿಶೇಷ ಅನುದಾನದಡಿ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಡುಗಡೆಯಾಗಿರುವ ರೂ. 5 ಕೋಟಿ ಅನುದಾನದಡಿ ಕೂಡಲೇ ಕಾಮಗಾರಿ ಆರಂಭಿಸಬೇಕು. ಬೀದಿದೀಪಗಳ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಬೇಕು. ಸ್ವಚ್ಛತೆ, ಕಸ ವಿಲೇವಾರಿ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬರದಂತೆ ಗಮನ ನೀಡಬೇಕು ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರಿಗೆ ಸೂಚಿಸಿದರು.
ನಗರಕ್ಕೆ 24/7 ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಿ, ಯೋಜನೆಗೆ ನೀರು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಆಗುವವರೆಗೂ ಅಗತ್ಯ ನೀರನ್ನು ನದಿಯ ಮೂಲಕ ಪೂರೈಸುವಂತೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರ ಮಹತ್ವಾಕಾಂಕ್ಷೆಯ ನೀರು ಪೂರೈಕೆ ಯೋಜನೆ ಕಾರ್ಯಗತಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಪುರಸಭೆ ಮಾಜಿ ಅಧ್ಯಕ್ಷ ಸರ್ವರಭಾಷಾ ಪೀರ್ಜಾಧೆ, ಅನಂತವಿಕಾಸ ನಿಂಗೋಜಿ, ಖುರ್ಷಿದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಮಾಜಿ ಉಪಾಧ್ಯಕ್ಷರಾದ ಶಂಶಿಯಾ ಬಾಳೂರ, ಮಹೇಶ ಪವಾಡಿ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.