ಸಮರ್ಪಕವಾಗಿ ಆಹಾರ ಧಾನ್ಯ ವಿತರಿಸಿ

5SKPP1 FOOD TEAM
ಸಕಲೇಶಪುರ ಪಟ್ಟಣದ ವಿವಿಧೆಡೆ ಆಹಾರದ ಗುಣಮಟ್ಟದ ಕುರಿತು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಅವರ ತಂಡ ಪರಿಶೀಲನೆ ಮಾಡಿತು. ಶಾಸಕ ಸಿಮೆಂಟ್ ಮಂಜು ಹಾಜರಿದ್ದರು.
Published on

ಸಕಲೇಶಪುರ: ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡದಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಎಚ್ಚರಿಕೆ ನೀಡಿದರು.

ರಾಜ್ಯ ಹಾಗೂ ಕೇಂದ್ರಿಯ ಆಹಾರ ಆಯೋಗದ ಪದಾಧಿಕಾರಿಗಳ ತಂಡ ಶನಿವಾರ ತಾಲೂಕಿನ ಆನೆಮಹಲ್ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ, ಪಡಿತರ ವಿತರಣೆ ಮಾಡುವಾಗ ಹಣ ಪಡೆಯುತ್ತಾರೆಯೇ ಎಂದು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಸ್ತಾನಗಿದ್ದ ಅಕ್ಕಿ, ಗೋಧಿ, ಹಾಲಿನಪುಡಿ, ಮೊಟ್ಟೆ, ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲನೆ ಮಾಡಲಾಯಿತು. ಪಟ್ಟಣದ ಬಾಲಕೀಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಆಹಾರ ಧ್ಯಾನಗಳ ಗುಣಮಟ್ಟ ಪರಿಶೀಲನೆ ಮಾಡಲಾಯಿತು. ಅಲ್ಲದೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಪರಿಕರಗಳು, ದಾಸ್ತಾನು ಹಾಗೂ ದರಗಳನ್ನು ಪರಿಶೀಲಿಸಿದರು. ನಂತರ ವಿವಿಧ ಬೇಕರಿಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲನೆ ಮಾಡಿ, ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಪಡೆದುಕೊಳ್ಳಲು ಸೂಚಿಸಲಾಯಿತು. ರಸ್ತೆ ಬದಿ ಕಾಟನ್ ಕ್ಯಾಂಡಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಕೃತಕ ಬಣ್ಣ ಹಾಕುತ್ತಿರುವುದು ದೃಢಪಟ್ಟ ಕಾರಣ ಕಾರ್ಖಾನೆಗೆ ಬೀಗ ಜಡಿಯಲಾಯಿತು.

ಡಾ.ಎಚ್.ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಪಡಿತರ ವಿತರಣೆ, ವಿವಿಧ ವೇತನಗಳು, ಕೃಷಿ ಪರಿಕರಗಳ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ದೊರಕುತ್ತಿದೆ ಎಂಬುದನ್ನು ಪರಿಶೀಲಿಸಲು ನಮ್ಮ ತಂಡ ಹಾಸನ ಜಿಲ್ಲಾ ಪ್ರವಾಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿಗೂ ಆಗಮಿಸಿ ವಿವಿಧೆಡೆ ಪರಿಶೀಲನೆ ಮಾಡಲಾಗಿದೆ. ಮಕ್ಕಳಿಗೆ ಮೊಟ್ಟೆ ವಿತರಣೆ, ದಾಖಲಾತಿ ಸಂಗ್ರಹಿಸದ ಹಾಗೂ ದಾಸ್ತಾನು ಕುರಿತು ಮಾಹಿತಿ ನೀಡದ ಸಕಲೇಶಪುರ ತಾಲೂಕು ಆನೆಮಹಲ್‌ನ ಅಂಗನವಾಡಿ ಕಾರ್ಯಕರ್ತೆ ಎಂ.ವಿ.ರೇಷ್ಮಾ ಅವರನ್ನು ಗೌರವಧನ ಸೇವೆಯಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪಬೇಕು ಎಂಬುದೇ ನಮ್ಮ ಉದ್ದೇಶ ಎಂದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹಾಗೂ ಸರ್ಕಾರದ ಮೆನುವಿನಂತೆ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಯಾದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ಆಹಾರ ಪರ್ದಾಗಳಿಗೆ ರಾಸಾಯನಿಕ ಬಣ್ಣ ಹಾಕುವುದು ಹೆಚ್ಚಾಗುತ್ತಿದ್ದು, ಇದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯಾರೂ ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಣ್ಣ ಹಾಕಬಾರದು. ಬೇಕರಿ ಹಾಗೂ ಹೋಟೆಲ್‌ಗಳಲ್ಲೂ ಆಹಾರದಲ್ಲಿ ಕೆಮಿಕಲ್ ಬಳಕೆ ಮಾಡಬಾರದು, ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದರು.

ಶಾಸಕ ಸಿಮೆಂಟ್ ಮಂಜು, ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣನವರ, ರೋಹಿಣಿ ಪ್ರಿಯಾ, ವಿಜಯಲಕ್ಷ್ಮೀ , ತಹಸೀಲ್ದಾರ್ ಮೇಘನಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net