ರೈತರಿಗೆ ಸಕಾಲದಲ್ಲಿ ರಸಗೊಬ್ಬರ ವಿತರಿಸಿ; ಬಾಂಡ್ ಗಣಪತಿ

19adarshkdga1
Published on

ಮಡಿಕೇರಿ: ರೈತರಿಗೆ ಸಕಾಲದಲ್ಲಿ ರಸಗೊಬ್ಬರ ವಿತರಿಸುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮನವಿ ಮಾಡಿದರು.


ನಗರದ ಕೆಳಗಿನ ಕೊಡವ ಸಮಾಜದಲ್ಲಿ ಕೊಡಗು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಸಂಬಂಧಿಸಿದಂತೆ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದೆ. ಸೆ೮ ರಂದು ವಿರಾಜಪೇಟೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ಗೊಬ್ಬರ ಜತೆಯಲ್ಲಿ ಲಘು ಪೋಷಕಾಂಶಗಳನ್ನು ಜೋಡಿಸಿ ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬಂದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಂತೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಗೊಬ್ಬರ ಮಾರಾಟದ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.


ಜಿಲ್ಲೆಯ ಸಹಕಾರ ಸಂಘಗಳಿಂದ ಲಘುಪೋಷಕಾಂಶಗಳಿಗೆ ಬೇಡಿಕೆ ಇಲ್ಲದಿದ್ದರೂ ರಸಗೊಬ್ಬರ ಸರಬರಾಜು ಮಾಡುವ ವಿತರಕರು ಪೋಷಕಾಂಶಗಳನ್ನು ಗೊಬ್ಬರದ ಜತೆಯಲ್ಲಿ ಲಿಂಕ್ ಮಾಡಿ ಕಳುಹಿಸುತ್ತಿರುವುದು ಎಲ್ಲರಿಗೂ ಮಾಹಿತಿ ಇದೆ. ಈ ಬಗ್ಗೆ ಇತ್ತೀಚಿಗೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗು ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ರೈತರ ಮನವೊಲಿಸಿ ಲಘುಪೋಷಕಾಂಶಗಳನ್ನು ವಿತರಿಸುವಂತೆ ಜಂಟಿ ನಿರ್ದೇಶಕರು ಸಭೆಯಲ್ಲಿ ಸಲಹೆ ನೀಡಿರುತ್ತಾರೆ. ಗೊಬ್ಬರ ವಿತರಕ ಸಂಸ್ಥೆಯವರು ೧೩ ಟನ್ ಎಂಒಪಿ ಗೊಬ್ಬರಕ್ಕೆ ೨ ಟನ್ ಪಾಲಿ ಸಲ್ಪೇಟ್ ಹಾಗೂ ೧೩ ಟನ್ ಯೂರಿಯಾದ ಜತೆಯಲ್ಲಿ ೨೪ ಲೀಟರ್ ನ್ಯಾನೋ ಯೂರಿಯಾ ಜೋಡಿಸಿ ಕಳುಹಿಸುತ್ತಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ದೂರಿದರು.


ರೈತರಿಗೆ ಲಘು ಪೋಷಕಾಂಶ ವಿತರಿಸಬೇಕಾದ ಅನಿವಾರ್ಯತೆ ಸಹಕಾರ ಸಂಘಗಳಿಗೆ ಎದುರಾಗಿದೆ. ಈ ವಿಚಾರವು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರ ಗಮನಕ್ಕೂ ಬಂದಿರುತ್ತದೆ. ಆದರೂ ಸಹ ಎಲ್ಲಾ ಸಹಕಾರ ಸಂಘಗಳಿಗೆ ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಂತೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಗೊಬ್ಬರ ಮಾರಾಟದ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ಸರಿಯಲ್ಲ. ಈ ವಸ್ತುಸ್ಥಿತಿಯ ಹಿನ್ನಲೆಯಲ್ಲಿ ಮಳೆಗಾಲವು ಕೊನೆಗೊಳ್ಳುತ್ತಿದ್ದು, ರೈತರಿಗೆ ಸಕಾಲದಲ್ಲಿ ಗೊಬ್ಬರವನ್ನು ವಿತರಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.


ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಮಾತನಾಡಿ, ರಸಗೊಬ್ಬರ ಪೂರೈಕೆ ಸಂಬಂಧಿಸಿದಂತೆ ಜಿಲ್ಲೆಗೊಂದು ನೀತಿ ಮಾಡಿದರೆ ಒಳ್ಳೆಯದು. ಕೃಷಿಗೆ ಸಂಬಂಧಿಸಿದಂತೆ ಭತ್ತ ಮತ್ತು ಮುಸುಕಿನ ಜೋಳ ಕೃಷಿ ಮಂಡಳಿಗೆ ಪತ್ರ ಬರೆದು ರಸಗೊಬ್ಬರ ಬೇಡಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೊಡಗು ಜಿಲ್ಲೆಗೆ ದರ ನಿಗಧಿಯಾಗಿಲ್ಲ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.


ಗೊಬ್ಬರ ವಿತರಕ ಸಂಸ್ಥೆಯೊರ್ವರು ಮಾತನಾಡಿ, ಕೊಡಗು ಜಿಲ್ಲೆಗೆ ಇನ್ನು ಮುಂದೆ ಲಘು ಪೋಷಕಾಂಶಗಳನ್ನು ಒತ್ತಾಯ ಪೂರ್ವಕವಾಗಿ ಸರಬರಾಜು ಮಾಡುವುದಿಲ್ಲ ಹಾಗೂ ಗೊಬ್ಬರದ ಜತೆಯಲ್ಲಿ ಲಿಂಕ್ ಮಾಡುವುದಿಲ್ಲ ಎಂದು ಸಭೆಗೆ ಆಶ್ವಾಸನೆ ನೀಡಿದರು.


ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಸಹಕಾರ ಸಂಘಗಳ ಮೂಲಕ ರಸಗೊಬ್ಬ್ಬರ ಮಾರುವವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ತಮ್ಮ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದರು.


ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಹರೀಶ್ ಪೂವಯ್ಯ, ನಿರ್ದೇಶಕರಾದ ರಮೇಶ್, ರಘು ನಾಣಯ್ಯ, ಅರುಣ್ ಭೀಮಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್.ರಮೇಶ್, ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತಾಲೂಕು ಸಹಾಯಕ ನಿರ್ದೇಶಕರು, ಗೊಬ್ಬರ ವಿತರಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net