ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ತಕ್ಷಣ ವಿತರಿಸಿ: ರಟ್ಟಿಹಳ್ಳಿರೈತ ಸಂಘದಿಂದ ಪ್ರತಿಭಟನೆ

Farmer Protest in Rattihalli
Published on

ರಟ್ಟಿಹಳ್ಳಿ: ಹಾವೇರಿ ಜಿಲ್ಲೆಯನ್ನು 2023-24ನೇ ಸಾಲಿನಲ್ಲಿ ಸರ್ಕಾರ ಸಂಪೂರ್ಣವಾಗಿ ಬರಗಾಲ ಪೀಡಿತ ಜಿಲ್ಲೆ ಎಂದು ಘೊಷಣೆ ಮಾಡಿದೆ. ಆದರೆ, ರೈತರಿಗೆ ಇಲ್ಲಿಯವರೆಗೆ ಸಂಪೂರ್ಣವಾಗಿ ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರದ ಹಣ ಸಂದಾಯವಾಗಿಲ್ಲ. ಸರ್ಕಾರ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ರಟ್ಟಿಹಳ್ಳಿ ತಾಲೂಕು ಘಟಕ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾ ಉಪವಿಭಾಗಾಧಿಕಾರಿ ಚೆನ್ನಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರ ಸಿಗುತ್ತಿಲ್ಲ. ಈ ವರ್ಷವೂ ಅಧಿಕ ಮಳೆಯಿಂದಾಗಿ ತೋಟಗಾರಿಕೆ ಸೇರಿದಂತೆ ಎಲ್ಲ ಬೆಳೆಗಳು ಹಾನಿಯಾಗಿವೆ. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೇ ಮಾರುಕಟ್ಟೆಯಲ್ಲಿ ರೈತರು ಮೋಸ ಹೋಗುತ್ತಿದ್ದಾರೆ. 2 ತಿಂಗಳಿಂದ ಹಾಲಿನ ಬಿಲ್ಲು ಮತ್ತು ಕಳೆದ 6 ತಿಂಗಳುಗಳಿಂದ ಹಾಲು ಉತ್ಪಾದಕರಿಗೆ ಪೋ›ತ್ಸಾಹಧನ ವಿತರಣೆಯಾಗಿಲ್ಲ. ರೈತರ ಫಲವತ್ತಾದ ಭೂಮಿಯನ್ನು ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಲು ಸಂಚು ಹಾಕುತ್ತಿದ್ದು ಇದನ್ನು ಕೈಬಿಡಬೇಕು. ತುಂಗಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ತಕ್ಷಣ ರೈತರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಪವಿಭಾಗಾಧಿಕಾರಿ ಚೆನ್ನಪ್ಪ, ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸೋಣ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ತಹಸೀಲ್ದಾರ್ ಕೆ. ಗುರುಬಸವರಾಜ, ಯು.ಟಿ.ಪಿ. ಇಂಜಿನಿಯರ್ ಹನುಮಂತಪ್ಪ ಯು., ತೋಟಗಾರಿಕೆ ಇಲಾಖೆ ಅಧಿಕಾರಿ ಲಕ್ಷ್ಮೀಕಾಂತ ಬೊಮ್ಮಣ್ಣನವರ ಇತರರು ಇದ್ದರು.

ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಶಂಕ್ರಗೌಡ ಶಿರಗಂಬಿ, ಬಸನಗೌಡ ಗಂಗಪ್ಪನವರ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಎಚ್.ಎಚ್. ಮುಲ್ಲಾ, ಮಹ್ಮದ್​ಗೌಸ ಪಾಟೀಲ, ರಾಜು ಮಳಗೊಂಡರ, ಉಜಿನೆಪ್ಪ ಕೋಡಿಹಳ್ಳಿ, ಪ್ರಶಾಂತ ದ್ಯಾವಕ್ಕಳವರ, ಕರಬಸಪ್ಪ ಬಸಾಪುರ, ಪ್ರಭು ಮುದಿವೀರಣ್ಣನವರ, ಮಂಜು ಬಾಗೋಡಿ, ಮರಿಗೌಡ ಪಾಟೀಲ, ಗಂಗನಗೌಡ ಮುದಿಗೌಡ್ರ, ಪ್ರಭುಗೌಡ ಪ್ಯಾಟಿ, ಶಾಂತನಗೌಡ ಪಾಟೀಲ, ಶಂಭು ಮುತ್ತಗಿ, ಮಲ್ಲೇಶಪ್ಪ ಸಿರಗೇರಿ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net