ಕೊಪ್ಪಳ: ಕುಷ್ಟಗಿ ಠಾಣೆ ಪೊಲೀಸರು ಆಡು ಹತ್ಯೆ ಮಾಡಿದ್ದಕ್ಕೆ ಜಾನುವಾರು ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ. ಕಾಯ್ದೆ ದುರ್ಬಳಕೆ ಮಾಡಿದ್ದಾರೆಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಗರಂ ಆಗಿದ್ದಾರೆ.
ಟಾಟಾ ಏಸ್ ವಾಹನದಲ್ಲಿ ಚನ್ನಬಸಪ್ಪ ಹಾದಿಮನಿ ಎಂಬುವವರು 2022ರ ಮಾರ್ಚ್ 3ರಂದು ಆಡು, ಕುರಿ ಚರ್ಮ ಸಾಗಣೆ ಮಾಡುತ್ತಿದ್ದರು. ವಶಕ್ಕೆ ಪಡೆದ ಪೊಲೀಸರು ಜಾನುವಾರು ಹತ್ಯೆ ಸರಂಕ್ಷಣೆ ಹಾಗೂ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಗೋಹತ್ಯೆ ಎಂದು ಕರೆಯಲ್ಪಡುವ ಕಾಯ್ದೆಯಡಿ ಆಡು ಹತ್ಯೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿದ್ದು ವಿಪರ್ಯಾಸ. ಜಾನುವಾರು ಎಂದರೆ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಎತ್ತು ಹಾಗೂ 13 ವರ್ಷದೊಳಗಿನ ಎಮ್ಮೆ ಅಥವಾ ಕೋಣ ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕುರಿ, ಆಡು ಹಾಗೂ ಆಕಳು ಬಗ್ಗೆ ವ್ಯತ್ಯಾಸ ಗೊತ್ತಿಲ್ಲದ, ಕೇವಲ ಕಾನೂನು ಪಂಡಿತರು, ಕಾನೂನು ಜಾರಿ ಮಾಡುವವರು ಎಂದು ಕರೆಯಲ್ಪಡುವ ಪೊಲೀಸರು ಕಾಯ್ದೆ ಸರಿಯಾಗಿ ಅರ್ಥೈಸಿಕೊಂಡಿಲ್ಲ. ತಪ್ಪಾಗಿ ಅರ್ಥೈಸಿ ಪ್ರಕರಣ ದಾಖಲಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿದ್ದಲ್ಲದೇ ಇದೆ ಕಾಯ್ದೆಯಡಿ ಅಂತಿಮ ವರದಿ ಸಲ್ಲಿಸಿ ಮೂರ್ಖತನದ ಪರಮಾವಧಿ ಪ್ರದರ್ಶಿಸಿದ್ದಾರೆಂದು ಗರಂ ಆಗಿದ್ದಾರೆ.
ಸರಿಯಾದ ಕಾನೂನು, ಕಲಂನಡಿ ಪ್ರಕರಣ ದಾಖಲಿಸದ ಕಾರಣ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೇ ಪೊಲೀಸರ ವಿರುದ್ಧ ಕ್ರಮ್ಕಕೆ ಎಸ್ಪಿ ಹಾಗೂ ಬಳ್ಳಾರಿ ಐಜಿಪಿಗೆ ಕಳಿಸಿ ಸೂಕ್ತ ತರಬೇತಿ ಕೊಡಿಸುವಂತೆ ನಿರ್ದೇಶಿಸಿದ್ದಾರೆ.