ಕೊಪ್ಪಳ: ನರೇಗಾ ಕೂಲಿಕಾರರು ಸೆ.30ರೊಳಗೆ ಕಡ್ಡಾಯವಾಗಿ ಇಕೆವೈಸಿ ಮಾಡಿಕೊಳ್ಳುವಂತೆ ತಾಪಂ ಸಹಾಯಕ ನಿರ್ದೇಶಕ ಯಂಕಪ್ಪ ಕರೆ ನೀಡಿದರು.
ತಾಲೂಕಿನ ಓಜನಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಕೆವೈಸಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಹಂತದಲ್ಲಿ ಹಾವೇರಿ, ಕೋಲಾರ, ಹಾಸನ, ಕೊಪ್ಪಳ, ತುಮಕೂರು ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇಕೆವೈಸಿ ಮಾಡಲು ಆಯ್ಕೆ ಮಾಡಲಾಗಿದೆ. ಸೆ.30ರೊಳಗೆ ಎಲ್ಲರೂ ಕೆವೈಸಿ ಮಾಡುವುದು ಕಡ್ಡಾಯ. ಎಲ್ಲ ಕೂಲಿಕಾರರು ಮಾಡಿಸಿಕೊಳ್ಳಬೇಕು. ಸಮುದಾಯ ಕಾಮಗಾರಿಗಳಲ್ಲಿ ಎನ್ಎಂಎಂಎಸ್ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ. ಅಕ್ಟೋಬರ್ 1ರಿಂದ ಮುಖ ಆಧರಿಸಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಇಕೆವೈಸಿ ಆಗಿದ್ದಲ್ಲಿ ಮಾತ್ರ ಆಧಾರ್ ಸಂಖ್ಯೆ, ಮುಖ ಹೊಂದಾಣಿಕೆ ಆದಲ್ಲಿ ಮಾತ್ರ ಹಾಜರಾತಿ ದೊರೆಯಲಿದೆ ಎಂದರು.
ನರೇಗಾದಡಿ ಕೇವಲ ಸಾಮುದಾಯಿಕ ಕಾಮಗಾರಿ ಅಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ಕುಟುಂಬಕ್ಕೆ ವರ್ಷದಲ್ಲಿ 100 ದಿನ ಕೆಲಸ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಯೋಜನೆಯ ಮೂಲ ಉದ್ದೇಶ ಈಡೇರುತ್ತಿರುವುದು ಕೂಲಿಕಾರರಲ್ಲಿ ಸಂತಸ ತಂದಿದೆ. ಯೋಜನೆಯಿಂದ ಬಡ ಕುಟುಂಬಗಳಿಗೆ ನೆರವಾಗಿದೆ ಎಂದು ತಿಳಿಸಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ, ಕಾರ್ಯದರ್ಶಿ ಆದಯ್ಯಸ್ವಾಮಿ, ಗ್ರಾಮ ಕಾಯಕ ಮಿತ್ರ ಮೆಹಬೂಬಿ ದೊಡ್ಡಮನಿ, ಡಿಇಒ ಬಸವರಾಜ ಸಮಗಂಡಿ ಇತರರಿದ್ದರು.