ಬೆಂಬಲ ಬೆಲೆಯಡಿ ವಿವಿಧ ಬೆಳೆ ಖರೀದಿಸಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ

distrcit koppal minimun supporting price meeting dc suresh itnal
Published on

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಭತ್ತ, ಬಿಳಿ ಜೋಳ, ಕಿರು ಸಿರಿಧಾನ್ಯಗಳು ಮತ್ತು ರಾಗಿ ಬೆಳೆಗಳ ಖರೀದಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಪ್ರತಿ ಎಕರೆಗೆ 25 ಕ್ವಿಂಟಾಲ್​ನಂತೆ ಗರಿಷ್ಠ 50 ಕ್ವಿಂಟಾಲ್​ ಭತ್ತ ಖರೀದಿಸಿ. ಗಂಗಾವತಿ, ಕಾರಟಗಿ, ಸಿದ್ದಾಪುರ, ಮರಳಿ, ವೆಂಕಟಗಿರಿ, ಕೊಪ್ಪಳ, ಹಿಟ್ನಾಳನಲ್ಲಿ ಕೇಂದ್ರ ಆರಂಭಿಸಿ. ಸೆ.29ರಿಂದ ರೈತರ ನೋಂದಣಿ ಮಾಡಿಕೊಳ್ಳಿ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ ನೇಮಕವಾಗಿದೆ ಎಂದು ತಿಳಿಸಿದರು.

ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಸಾಮಾನ್ಯ ಭತ್ತಕ್ಕೆ 2,369 ರೂ., ಗ್ರೇಡ್​ ಎ ಭತ್ತಕ್ಕೆ 2,389 ರೂ. ದರ ನಿಗದಿಯಾಗಿದೆ. ಅ.31ವರೆಗೆ ನೋಂದಣಿಗೆ ಅವಕಾಶವಿದೆ. ನವೆಂಬರ್​ 1ರಿಂದ 2026ರ ೆಬ್ರವರಿ 28ವರೆಗೆ ಖರೀದಿ ಮಾಡಲಾಗುವುದು. ಹೈಬ್ರಿಡ್​ ಬಿಳಿ ಜೋಳಕ್ಕೆ 3,699 ರೂ., ಮಾಲ್ದಂಡಿ ಬಿಳಿ ಜೋಳಕ್ಕೆ 3,749 ರೂ.ದರ ನಿಗದಿಯಾಗಿದೆ. ಡಿ.1ರಿಂದ 2026ರ ಮಾರ್ಚ್​ 31ವರೆಗೆ ನೋಂದಣಿ ನಡೆಯಲಿದೆ. ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳದಲ್ಲಿ ಕೇಂದ್ರ ತೆರೆಯಲಾಗುವುದು. ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಾಲ್​ನಂತೆ ಗರಿಷ್ಠ 150 ಕ್ವಿಂಟಲ್​ ಜೋಳ ಖರೀದಿಸಲಾಗುವುದೆಂದರು.

ವಾರ್ತಾಧಿಕಾರಿ ಡಾ.ಸುರೇಶ ಜಿ., ಎ.ಪಿ.ಎಂ.ಸಿ ಸಹಾಯಕ ನಿರ್ದೇಶಕ, ಕಾರ್ಯದರ್ಶಿಗಳು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರು, ಮಾರಾಟ ಮಂಡಳಿಗಳ ವ್ಯವಸ್ಥಾಪಕರು ಇದ್ದರು.

ಕಿರು ಸಿರಿ ಧಾನ್ಯಗಳ ಖರೀದಿ

ಸಾಮೆ ಮತ್ತು ನವಣೆ ಪ್ರತಿ ಕ್ವೀಂಟಲ್​ಗೆ 4,686 ರೂ. ದರ ನಿಗದಿಪಡಿಸಿದ್ದು, ಅ.1 ರಿಂದ ಡಿ.15ವರೆಗೆ ನೋಂದಣಿಗೆ ಅವಕಾಶವಿದೆ. 2026ರ ಜನವರಿ 1 ರಿಂದ ಮಾರ್ಚ್​ 31ವರೆಗೆ ಖರೀದಿ ಮಾಡಲಾಗುವುದು. ಕುಷ್ಟಗಿ, ಕನಕಗಿರಿ ಮತ್ತು ಕೊಪ್ಪಳದಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು. ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್​ನಂತೆ ಗರಿಷ್ಠ 50 ಕ್ವಿಂಟಲ್​ ಖರೀದಿಸಲಾಗುವುದು ಎಂದು ಎಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net