ಕಾರ್ಖಾನೆ ಆರಂಭಕ್ಕೆ ಸಿದ್ಧತೆ ?, ದಾರಿ ತಪ್ಪಿಸುತ್ತಿರುವ ಜನಪ್ರತಿನಿಧಿಗಳು

distrcit koppal bspl protest gavishree special story
Published on

ವಿಜಯವಾಣಿ ವಿಶೇಷ ಕೊಪ್ಪಳ

ಬಿಎಸ್​ಪಿಎಲ್​ ಸೇರಿ ಹೊಸ ಕಾರ್ಖಾನೆಗಳ ಆರಂಭ ವಿರೋಧಿಸಿದ ನಡೆದ ಬೃಹತ್​ ಹೋರಾಟ ಲ ಏನೆಂಬ ಬಗ್ಗೆ ಜಿಲ್ಲೆಯ ಜನರಲ್ಲಿ ಗೊಂದಲ ಮುಂದುವರೆದಿದೆ. ಗವಿಶ್ರೀಗಳು ಜನಪ್ರತಿನಿಧಿಗಳಿಗೆ ಜವಾಬ್ದಾರಿವಹಿಸಿ ಮೌನವಾದರೆ, ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ಮುಂದುವರೆಸಿದೆ. ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಶ್ರೀಗಳತ್ತ ಬೊಟ್ಟು ಮಾಡಿ ತಟಸ್ಥವಾಗಿದೆ. ಇತ್ತ ಗೊಂಡಬಾಳ ಬಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಬೇಕಾದ ಎಲ್ಲ ಪರವಾನಗಿ ಸರ್ಕಾರ ನೀಡಿದೆ. ಬಿಎಸ್​ಪಿಎಲ್​ ಕಾರ್ಖಾನೆ ಆರಂಭಕ್ಕೆ ಭರದ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು ಮುಂದೇನು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ನಗರಕ್ಕೆ ಹೊಂದಿಕೊಂಡಂತೆ ಬೃಹತ್​ ಕಾರ್ಖಾನೆ ಆರಂಭಕ್ಕೆ ಶುರುವಾದ ಹೋರಾಟ ಬಳಿಕ ಕೊಪ್ಪಳಕ್ಕೆ ಯಾವುದೇ ಹೊಸ ಕಾರ್ಖಾನೆ ಬೇಡವೆಂಬ ನಿಲುವು ತಾಳಿತು. ಈಗಿರುವ ಕಾರ್ಖಾನೆಗಳ ವಿಸ್ತರಣೆಗೂ ಅವಕಾಶ ನೀಡದಂತೆ ಗವಿಶ್ರೀಗಳು ಮನವಿ ಮಾಡಿದರು. ಆದರೆ, ಬಿಎಸ್​ಪಿಎಲ್​ ಕೇಂದ್ರವಾಗಿಸಿ ಹೋರಾಟ ಸಾಗಿದೆ. ಇತ್ತ ಮುದ್ದಾಬಳ್ಳಿ&ಗೊಂಡಬಾಳ ಬಳಿ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ಜನ ಆಗ್ರಹಿಸಿದ್ದರೂ ಸರ್ಕಾರ, ಸಂಬಂಧಿಸಿದ ಇಲಾಖೆಗಳು ಎಲ್ಲ ಪರವಾನಗಿ ನೀಡಿವೆ. ಇದೀಗ ಗ್ರಾಪಂ ಮಟ್ಟದಲ್ಲಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಬಿಎಸ್​ಪಿಎಲ್​ ಸುತ್ತಲೂ ತಡೆಗೋಡೆ ನಿರ್ಮಿಸಿದ್ದು ಒಳಗೆ ಕೆಲಸ ಶುರು ಮಾಡಿದೆ.

ಹಂತ&ಹಂತವಾಗಿ ಕಾರ್ಖಾನೆ ಆರಂಭಿಸಲು ತಯಾರಿ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೂರಕವೆಂಬಂತೆ ಬೃಹತ್​ ಯಂತ್ರಗಳು, ಇನ್ನಿತರ ಸಾಮಗ್ರಿಗಳನ್ನು ಕೆಲ ಹಾಕಲಾಗುತ್ತಿದೆ. ನೆಲ ಸಮತಟ್ಟು ಮಾಡಲಾಗಿದೆ. ಹಾಲವರ್ತಿ ಗ್ರಾಮ ಸಂಪರ್ಕಿಸಲು ಇದ್ದ ರಸ್ತೆಯನ್ನೂ ಮುಚ್ಚಿದ್ದು ಗ್ರಾಮಸ್ಥರು ಕಂಪನಿಗೆ ತೆರಳಲು ಹತ್ತಾರು ಕಿ.ಮೀ.ಸಾಗುವಂತಾಗಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಸರ್ಕಾರ ತನ್ನ ನಿರ್ಧಾರ ಏನೆಂದು ಸ್ಪಷ್ಟಪಡಿಸುತ್ತಿಲ್ಲ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಯಿಂದ ವರದಿ ಪಡೆದು ಮುಂದಿನ ನಡೆ ತಿಳಿಸುವುದಾಗಿ ಸಾಗಹಾಕಿದ್ದಾರೆ.

ಹೋರಾಟ ವೇಳೆ ಸದನದಲ್ಲಿ ಮಾತನಾಡಿದ್ದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್​ ಕೊಪ್ಪಳಕ್ಕೆ ಬಂದು ಸಭೆ ನಡೆಸುವುದಾಗಿ ಹೇಳಿದ್ದರು. ಶ್ರೀಗಳು, ಹೋರಾಟಗಾರರೊಂದಿಗೆ ಚರ್ಚಿಸುವೆ. ಪರಿಸರ ಹಾಳಾಗುತ್ತಿರುವ ಬಗ್ಗೆ ತಜ್ಞರನ್ನು ನೇಮಿಸಿ ವರದಿ ಪಡೆವ ಭರವಸೆ ನೀಡಿದ್ದರು. ಇಷ್ಟು ದಿನವಾದರೂ ಸಚಿವರು ಕೊಪ್ಪಳಕ್ಕೆ ಬಂದಿಲ್ಲ. ಕಾರ್ಖಾನೆ ರದ್ದುಗೊಳಿಸಿ. ಅದರ ಹೊರತು ಸಭೆ, ಚರ್ಚೆ ಬೇಡವೆಂದು ಗವಿಶ್ರೀಗಳು ತಿಳಿಸಿದ್ದಾರೆಂಬ ಮಾತುಗಳೂ ಇವೆ. ಇನ್ನು ಇತ್ತೀಚೆಗೆ ಹೋರಾಟಗಾರರ ಕರೆದ ಸಭೆಗೆ ಸಮಯ ನೀಡಿದ ಶಾಸಕ ರಾವೇಂದ್ರ ಹಿಟ್ನಾಳ ಸಭೆಗೆ ಹೋಗದೆ ಜಾರಿಕೊಂಡಿದ್ದು ಅನೇಕ ಚರ್ಚೆ ಹುಟ್ಟುಹಾಕಿದೆ.

ಹೋರಾಟ ಹಾದಿ ಆಶಯವೇನು

ಆರಂಭದಲ್ಲಿ ಗವಿಶ್ರೀಗಳು ಹೋರಾಟ ನೇತೃತ್ವ ವಹಿಸುತ್ತಲೇ ಜನರು, ಸಂ,ಸಂಸ್ಥೆಗಳು ಸಾಗರದಂತೆ ಹರಿದು ಬಂದರು. ಜನಪ್ರತಿನಿಧಿಗಳು ಗುಟುರು ಹಾಕಿದರು. ಶ್ರೀಗಳು ಮತ್ತೊಂದು ಹೋರಾಟ ಬೇಡವೆನ್ನುತ್ತಲೇ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕರ ಗೂಡು ಸೇರಿದ್ದಾರೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ಮುಂದುವರೆಸಿದೆ. ಮನವಿ ನೀಡುವಿಕೆ, ಘೋಷಣೆ ಬರೆಯುವುದು, ಜನಪ್ರತಿನಿಧಿಗಳ ಸಭೆ ನಡೆಸಿ ಜಾಗೃತಿ ಮೂಡಿಸುತ್ತಿದೆ. ಗವಿಶ್ರೀಗಳು ಕೆಲ ದಿನ ತೀರ್ಥ ಯಾತ್ರೆ ಕೈಗೊಂಡು ಬಳಿಕ ಸುಮ್ಮನಾಗಿದ್ದಾರೆ. ಕಾರ್ಖಾನೆ ಆರಂಭಕ್ಕೆ ಸಹಕರಿಸುತ್ತಿರುವ ಜನಪ್ರತಿನಿಧಿಗಳು, ಸರ್ಕಾರ ವಿರುದ್ಧ ಹೋರಾಟ ಮಾಡುತ್ತಿರುವ ಹೋರಾಟಗಾರರು ಶಾಸಕ, ಸಂಸದರನ್ನೇ ಕರೆದು ಸಭೆ ನಡೆಸಿ ಕಾರ್ಖಾನೆ ಆರಂಭಕ್ಕೆ ವಿರೋಧವಿದೆ ಎಂದು ಹೇಳಿಸುವ ಮೂಲಕ ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆಂಬ ಪ್ರಶ್ನೆ ಮೂಡಿಸಿದೆ.

ಹಳಿ ತಪ್ಪಿಸುವ ಕೆಲಸ ?

ಒಂದೆಡೆ ಹೋರಾಟಗಾರರು ಕರೆದ ಸಭೆಗಳಲ್ಲಿ, ಮಾಧ್ಯಮದವರು ಪ್ರಶ್ನಿಸಿದಾಗ ಕಾರ್ಖಾನೆ ಆಗಲು ಬಿಡುವುದಿಲ್ಲ ಎಂದು ಹೇಳುವ ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಗಳ ಸಿಎಸ್​ಆರ್​ ನಿಧಿಯಡಿ ಆರೋಗ್ಯ ಶಿಬಿರ, ಹೋಳಿ ಉತ್ಸವ, ಐಪಿಎಲ್​ ಕ್ರಿಕೆಟ್​, ಅಂಚೆ ಕಚೇರಿ, ಶಾಲೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ಪಡೆಯುವುದಾಗಿ ಹೇಳುತ್ತಾರೆ. ಗವಿಶ್ರೀಗಳು ಹೇಳಿದಂತೆ ತಾಲೂಕು ಕೇಂದ್ರಕ್ಕೆ ಅಧಿಕಾರಿ ವರ್ಗವಾಗಬೇಕಾದರೆ ಶಾಸಕರ ಶಿಾರಸ್ಸಿಲ್ಲದೆ ಏನೂ ಆಗುವುದಿಲ್ಲ. ಇಷ್ಟು ದೊಡ್ಡ ಕಾರ್ಖಾನೆಗಳು ಬರುತ್ತಿರುವುದು ಇವರ ಗಮನಕ್ಕಿಲ್ಲವಾ ಎಂಬ ಪ್ರಶ್ನೆಗೆ ಶಾಸಕ, ಸಂಸದರು ಸ್ಪಷ್ಟ ಉತ್ತರ ನೀಡಬೇಕಿದೆ. ಮುದ್ದಾಬಳ್ಳಿ ಬಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ತಮ್ಮ ಗಮನಕ್ಕಿಲ್ಲ ಎಂದು ಹೇಳುವ ಮೂಲಕ ಜನಪ್ರನಿಧಿಗಳ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net