ಜನನ-ಮರಣ ಮಾಹಿತಿ ನಿಖರವಿರಲಿ, ಎಡಿಸಿ ಸಿದ್ರಾಮೇಶ್ವರ ಸೂಚನೆ

distrcit koppal adc sidrameswara meeting birth death certificate
Published on

ಕೊಪ್ಪಳ: ಜನನ-ಮರಣ ನಿಖರ ಮಾಹಿತಿ ಸಂಗ್ರಹಿಸಿ ತಂತ್ರಾಂಶದಲ್ಲಿ ನೋಂದಣಿ ಆಗುವಂತೆರ ನೋಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜನನ&ಮರಣ ಹಾಗೂ ನಿರ್ಜೀವ ಜನನ ವಿವರ ಕಡ್ಡಾಯವಾಗಿ ನೋಂದಣಿ ಆಗಬೇಕು. ಕಾನೂನಿನಂತೆ ನೊಂದಾಯಿಸುವ ಜತೆಗೆ ಶೇ.100ರಷ್ಟು ಸಾಧನೆ ಮಾಡಬೇಕು. ಬದುಕಿರುವ ಪ್ರತಿಯೊಬ್ಬರಿಗೂ ಜನನ ಪ್ರಮಾಣ ಪತ್ರ ತುಂಬಾ ಮುಖ್ಯ. ಮರಣದ ನಂತರ ಮರಣ ಪ್ರಮಾಣ ಪತ್ರ ಅವರ ಕುಟುಂಬಕ್ಕೆ ಅಗತ್ಯ ದಾಖಲೆ. ಜನರಿಗೆ ಸಕಾಲದಲ್ಲಿ ಪ್ರಮಾಣ ಪತ್ರ ದೊರೆಯಬೇಕು. ಎಲ್ಲ ಗ್ರಾಮ ಆಡಳಿತಾಧಿಕಾರಿಗಳು, ವೈದ್ಯಾಧಿಕಾರಿಗಳು, ನಗರ&ಪುರಸಭೆ ಆಯುಕ್ತರು ಸರಿಯಾಗಿ ಕಾರ್ಯನಿರ್ವಹಿಸಿ. ಸೂಕ್ತ ಪರಿಶೀಲನೆ ಬಳಿಕ ನೋಂದಣಿ ಮಾಡಿ. ವಿಳಂಬ ಮಾಡಕೂಡದು. ಶೇ.100ರಷ್ಟು ನೋಂದಣಿ ಆಗಲೇಬೇಕೆಂದು ಸೂಚಿಸಿದರು.

ಜಿಲ್ಲಾ ಸಾಂಖಿಕ ಅಧಿಕಾರಿ ಸುಧಾಕರ ಮಾನೆ ಮಾತನಾಡಿ, 21 ದಿನದೊಳಗೆ ಯಾವುದೇ ಶುಲ್ಕವಿಲ್ಲದೆ ಜನನ&ಮರಣ ನೋಂದಣಿ ಮಾಡಬೇಕು. 2024ರ ತಿದ್ದುಪಡಿ ನಿಯಮದಂತೆ ಜನನ&ಮರಣ ಹೆಚ್ಚುವರಿ ಪ್ರಮಾಣ ಪತ್ರಗಳ ಶುಲ್ಕ 50ರೂ. ವಿಳಂಬ (ತಡ) ನೋಂದಣಿಗೆ ಘಟನೆ ಸಂಭವಿಸಿದ 21 ದಿನಗಳಿಂದ 30 ದಿನದವರೆಗೆ 20ರೂ., 30 ದಿನಗಳ ನಂತರ ಒಂದು ವರ್ಷದವರೆಗೆ 50 ರೂ. ಇರಲಿದೆ. ಕೊಪ್ಪಳ ಜಿಲ್ಲೆಯಲ್ಲಿ 731 ನೋಂದಣಿ ಘಟಕಗಳಿವೆ. ಇಜನ್ಮ ತಂತ್ರಾಂಶ ಮೂಲಕ ನೋಂದಣಿ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆ, ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಪ್ರಮಾಣ ಪತ್ರ ನೀಡಲಾಗುವುದು. ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಮಾಣ ಪತ್ರ ವಿತರಣೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಣ್ಣ ನೀವಾರಿ ಇಲಾಖೆ ಇಇ ಬಸವರಾಜ, ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಕಾಮಾಕ್ಷಿ ಹಾಗೂ ಪ್ರವಿಣ, ಸಮಾಲೋಚಕ ದತ್ತು ಪ್ರಸಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net