

ಅರಕಲಗೂಡು: ಪಟ್ಟಣದ ಕೋಟೆ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ 52ನೇ ವರ್ಷದ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ ಶುಕ್ರವಾರ ಸಡಗರ ಸಂಭ್ರಮಗಳಿಂದ ನೆರವೇರಿತು.
ಗಣೇಶ ಹಬ್ಬದಂದು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ಪ್ರತಿನಿತ್ಯ ಪ್ರಜೆ, ಪುನಸ್ಕಾರಗಳು ನಡೆದವು. ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ಬೆಳಗ್ಗೆ ವಿನಾಯಕನ ಮೂರ್ತಿಗೆ ವಿಶೇಷ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬಳಿಕ ಬಗೆ ಬಗೆಯ ಹೂವುಗಳಿಂದ ಅಲಂಕೃತ ವಾಹನದ ಮೇಲೆ ಗಣೇಶ ಮೂರ್ತಿಯನ್ನು ಕೂರಿಸಿ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು.
ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ವೈಭವೋಪೇತವಾಗಿ ಸಾಗಿತು. ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ಶಾಸಕ ಎ. ಮಂಜು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.