

ಸಕಲೇಶಪುರ: ತಾಲೂಕು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪನೆ ಮಾಡಿದ್ದ ರಾಮದೂತ ಗಣಪತಿಯನ್ನು ಗುರುವಾರ ರಾತ್ರಿ ಅದ್ದೂರಿಯಾಗಿ ವಿರ್ಸಜನೆ ಮಾಡಲಾಯಿತು.
ಪಟ್ಟಣದ ಕಮಲ್ ದೇವ್ ನರ್ಸಿಂಗ್ ಹೋಮ್ ಎದುರಿನ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಗುರುವಾರ ರವಿ ಶಾಸ್ತ್ರೀ ನೇತೃತ್ವದಲ್ಲಿ ಗಣಪತಿ ಹೋಮ ಮಾಡಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಬಳಿಕ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕ್ರೇನಿನ ಮೂಲಕ ಹೇಮಾವತಿ ಸೇತುವೆಯಿಂದ ರಾಮದೂತ ಗಣಪತಿಯನ್ನು ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಚಂಡೆ ವಾದ್ಯ, ರಾಮನಗರದ ಡೊಳ್ಳು ಕುಣಿತ, ಪೊಳಲು ಭಜನಾ ಮಂಡಳಿಯ ಭಜನೆ, ನಾಸಿಕ್ ಬ್ಯಾಂಡ್, ಡಿಜೆ, ಸ್ಥಳೀಯ ವಾದ್ಯಗಳನ್ನು ಬಳಸಿಕೊಳ್ಳಲಾಗಿತ್ತು. ಯುವಕರು, ಯುವತಿಯರು, ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶಾಸಕ ಸಿಮೆಂಟ್ ಮಂಜು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ, ರಾಮಧೂತ ಗಣಪತಿ ಸೇವಾ ಸಮಿತಿ ಪ್ರಮುಖರಾದ ಕೌಶಿಕ್ ಹೆನ್ನಲಿ, ಶಿವು ಜಿಪ್ಪಿ, ಮಂಜು ಕಬ್ಬಿನಗದ್ದೆ, ದುಷ್ಯಂತ್, ಧರ್ಮೇಶ್, ಪ್ರದೀಪ್, ಗುರು ಇತರರು ಇದ್ದರು.