ಕರಗುಂದ ಸ್ವರ್ಣಗೌರಮ್ಮದೇವಿ ಮೂರ್ತಿ ವಿಸರ್ಜನೆ

IMG-20241011-WA0493
ಅರಸೀಕೆರೆ ಗ್ರಾಮಾಂತರ ತಾಲೂಕಿನ ಜಾವಗಲ್ ಹೋಬಳಿಯ ಕರಗುಂದ ಗ್ರಾಮದ ಶ್ರೀ ಸ್ವರ್ಣ ಗೌರಮ್ಮ ದೇವಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಹೋಬಳಿ ಕರಗುಂದ ಗ್ರಾಮದ 300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸ್ವರ್ಣಗೌರಮ್ಮ ದೇವಿ ವಿಸರ್ಜನಾ ಮಹೋತ್ಸವವು ಸಡಗರ ಸಂಭ್ರಮದಿಂದ ಸೋಮವಾರ ನಡೆಯಿತು.

ಶ್ರೀ ಗೌರಮ್ಮ ದೇವಿ ಸೇವಾ ಸಮಿತಿ ವತಿಯಿಂದ ಗ್ರಾಮದಲ್ಲಿ ಹಬ್ಬದ ದಿನದಂದ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಮ್ಮ ದೇವಿ ಅವರಿಗೆ 44 ದಿನಗಳವರೆಗೆ ವಿಶೇಷ ಪೂಜೆ, ಅರ್ಚನೆ, ಪುಷ್ಪಾಲಂಕಾರ ಸಂಜೆ ಸಾಮೂಹಿಕ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಮೊದಲಾದ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ನಂತರ ಪುಷ್ಪಾಲಂಕೃತ ವಾಹನಗಳಲ್ಲಿ ಗೌರಿ-ಗಣೇಶ ಹಾಗೂ ಗ್ರಾಮ ದೇವತೆಗಳಾದ ಹೋತನಕಲ್ಲಮ್ಮ, ದೂತರಾಯಸ್ವಾಮಿ ಚೆಲುವಾಯಸ್ವಾಮಿ ಸಿದ್ದರಹಳ್ಳಿಯ ಬಸವೇಶ್ವರ ಸ್ವಾಮಿ, ಸಿದ್ದರಾಮೇಶ್ವರ ಸ್ವಾಮಿಯವರ ಉತ್ಸವಮೂರ್ತಿಗಳೊಂದಿಗೆ ಶೃಂಗರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿ ಮನೆಯ ಮುಂಭಾಗ ಸುಮಂಗಲಿಯರು ರಂಗವಲ್ಲಿಯಿಂದ ಶೃಂಗರಿಸಿ ಮೆರವಣಿಗೆಯಲ್ಲಿ ಬಂದ ದೇವಿಗೆ ಪೂಜೆ, ಹಣ್ಣು ಕಾಯಿ ಸಲ್ಲಿಸಿ, ಮಡಿಲಕ್ಕಿ ತುಂಬಿ, ಆರತಿ ಬೆಳಗಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ವಾದ್ಯಮೇಳ, ಮದ್ದುಗುಂಡು ಸಿಡಿತ, ಡೊಳ್ಳುಕುಣಿತ, ತಮಟೆ ಹಾಗೂ ಕರಡೆ ವಾದ್ಯದೊಂದಿಗೆ ಗ್ರಾಮದ ಯುವಕರು, ಗ್ರಾಮಸ್ಥರು ಸೇರಿದಂತೆ ನೂರಾರು ಜನರು ಸಾಗಿದರು. ನಂತರ ಗ್ರಾಮದ ಕಲ್ಯಾಣಿಯಲ್ಲಿ ಸ್ವರ್ಣಗೌರಮ್ಮ ದೇವಿಯನ್ನು ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net