

ಚನ್ನಗಿರಿ: ಪಟ್ಟಣದ ಹಿಂದು ಏಕತಾ ಗಣಪತಿಯ ವಿಸರ್ಜನೆ ಕಾರ್ಯ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 12 ಗಂಟೆಗೆ ಶಾಸಕ ಬಸವರಾಜ್ ಶಿವಗಂಗಾ ಗಣೇಶನಿಗೆ ಪೂಜೆ ಸಲ್ಲಿಸಿ, ನಂತರ ಗಣಪತಿ ಇರಿಸಿದ್ದ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಪಟ್ಟಣದ ಕಲ್ಲುಸಾಗರ ರಸ್ತೆ, ಕುರುಬರ ಬೀದಿ, ಮರಾಠ ಬೀದಿ, ಗಣಪತಿ ವೃತ್ತ, ಮಸೀದಿ ರಸ್ತೆ, ಉಪ್ಪಾರ ಬೀದಿ ಮೂಲಕ ಜೆಸಿ ರಸ್ತೆ, ನೃಪತುಂಗ ರಸ್ತೆ, ಹಳೇ ತಾಲೂಕು ಕಚೇರಿ ಬಳಿ ಸಾಗಿ ಗಣಪತಿ ಹೊಂಡಕ್ಕೆ ಗಣೇಶ ಮೂರ್ತಿಯನ್ನ್ನು ತಂದು ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ನಾಸಿಕ್ ಡೋಲ್, ತಮಟೆ, ಡೊಳ್ಳು, ವೀರಗಾಸೆ, ಚೆಂಡೆ, ಚಿತ್ರದುರ್ಗದ ಬೇಡರ ಪಡೆ, ಆಂಜನೇಯ ವೇಷಧಾರಿಗಳು ಮತ್ತು ವಿವಿಧ ತಂಡಗಳು ಭಾಗವಹಿಸಿದ್ದವು. ಹಾಡುಗಳಿಗೆ ಯುವಪಡೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳನ್ನು ಕೇಸರಿ ಬಣ್ಣ ಮತ್ತು ಬಾಳೆ ಕಂದು ಹೂವುಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಮಯದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.
ತಾಲೂಕು ಮತ್ತು ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಲ್ಲಲ್ಲಿ ಬಾಳೆಹಣ್ಣು, ನೀರು, ತಂಪು ಪಾನೀಯ ವಿತರಿಸಲಾಯಿತು.