

ಮಡಿಕೇರಿ: ಕೊಡಗೂ ಸೇರಿದಂತೆ ಮಲೆನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂಬಂಧಿತ ಸಲ್ಲಿಸಿರುವ ತಜ್ಞರ ಸಮಿತಿಯ ವರದಿಯನ್ನು ಸರ್ಕಾರ ತಿರಸ್ಕರಿಸುವಂತೆ ಮನವಿ ಮಾಡಿದ ಶಾಸಕ ಕೆ.ಜಿ.ಬೋಪಯ್ಯ, ವಿಕೋಪಪೀಡಿತ ಗ್ರಾಮಗಳಿಗೆ ತೆರಳದೇ ಪ್ರಕೃತಿ ವಿಕೋಪಕ್ಕೀಡಾದ ಜನರನ್ನು ಭೇಟಿ ಮಾಡದೇ ತಯಾರಿಸಿರುವ ವರದಿ ತಿರಸ್ಕಾರಕ್ಕೆ ಸೂಕ್ತವಾಗಿದೆ ಎಂದೂ ತಜ್ಞರ ಸಮಿತಿ ವಿರುದ್ಧ ಕಿಡಿಕಾರಿದರು.
ಕಾಲೂರು ಗ್ರಾಮದ ಯಶಸ್ವಿ ಕ್ಯಾಂಪಸ್‌ನಲ್ಲಿ ಭಾನುವಾರ ಭಾರತೀಯ ವಿದ್ಯಾಭವನ, ಇನ್ಪೋಸೀಸ್ ಫೌಂಡೇಶನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಎಸಿ.ಕೊಠಡಿಯಲ್ಲಿ ಕುಳಿತು ಅಧಿಕಾರಿಗಳು ಕೊಡಗಿನ ಗ್ರಾಮದ ಬಗ್ಗೆ ವರದಿ ನೀಡಿ ಗ್ರಾಮಸ್ಥರ ಜೀವನಕ್ಕೆ ಕೊಳ್ಳಿ ಇಡುವಂಥ ಕೆಲಸ ಮಾಡಿದ್ದಾರೆ. ವಿಕೋಪಕ್ಕೀಡಾದ ಕೊಡಗಿನಲ್ಲಿ ಅಧ್ಯಯನವನ್ನೇ ಈ ಸಮಿತಿ ಸಮರ್ಪಕವಾಗಿ ಕೈಗೊಂಡಿಲ್ಲ. ಇಂಥ ಏಕಪಕ್ಷೀಕ ವರದಿ ಸರಾಸಾಗಾಟಾಗಿ ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ಹೇಳಿದರು.
ಮಲೆನಾಡು ಜನರಿಂದ ಅನುಭವ ಕ್ರೋಡೀಕರಿಸಿ ನೀಡಬೇಕಾಗಿದ್ದ ವರದಿಯನ್ನು ಅಧಿಕಾರಿಗಳು, ಭೂಗರ್ಭ ಶಾಸ್ತ್ರಜ್ಞರು ಬೇಕಾಬಿಟ್ಟಿಯಾಗಿ ತಯಾರಿಸಿದ್ದಾರೆ. ಇಂಥ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು, ಈ ವರದಿ ಜಾರಿಗೆ ಬಂದಲ್ಲಿ ಕೊಡಗಿನವರು ಗ್ರಾಮಗಳನ್ನೇ ಬಿಟ್ಟು ತೆರಳಬೇಕಾದೀತು ಎಂದೂ ಎಚ್ಚರಿಸಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಬೆಂಗಳೂರು ಲಲಿತಕಲಾ ಪರಿಷತ್‌ನ ಸಂಜೆ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಚೌವಾಣ್, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ವೇದಿಕೆಯಲ್ಲಿದ್ದರು. ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರದ ಸದಸ್ಯರಾದ ಅಶೋಕ್ ಕುಮಾರ್, ನಾಗಲಕ್ಷ್ಮಿ ರಾವ್, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಖಜಾಂಜಿ ಡಾ.ಎಂ.ಜಿ.ಪಾಟ್ಕರ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕಲಾಚಿತ್ರಗಳ ಪ್ರದರ್ಶನದ ಉದ್ಘಾಟನೆ: ಕಾರ್ಯಕ್ರಮಕ್ಕೂ ಮೊದಲು ಕಲಾಶಿಬಿರದಲ್ಲಿ ಕಲಾವಿದರು ರಚಿಸಿದ ಕಲಾಚಿತ್ರಗಳ ಪ್ರದರ್ಶನವನ್ನೂ ಬೋಪಯ್ಯ ಉದ್ಘಾಟಿಸಿ ಕಲಾವಿದರ ಕುಂಚದಲ್ಲಿ ಮೂಡಿಬಂದ ಅಪೂರ್ವ ಚಿತ್ರಕಲೆಯ ಬಗ್ಗೆ ಶ್ಲಾಘಿಸಿದರು. ಇಂಥ ಕಲಾಶಿಬಿರಗಳು ಕೊಡಗಿನಲ್ಲಿ ಹೆಚ್ಚಾದರೆ ಸಾಂಸ್ಕೃತಿಕವಾಗಿ ಕೊಡಗು ಶ್ರೀಮಂತವಾಗಲಿದೆ ಎಂದು ಬೋಪಯ್ಯ ಅಭಿಪ್ರಾಯಪಟ್ಟರು. ರಾಜ್ಯದ ವಿವಿದೆಡೆಗಳಿಂದ ಬಂದಿದ್ದ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡುವ ಮೂಲಕ ಮೂರು ದಿನಗಳ ಕಲಾಶಿಬಿರ ಸಮಾಪನಗೊಂಡಿತು.
ಮನಸೂರೆಗೊಂಡ ಕೊಳಲು ವಾದನ: ಗಿರಿಕಂದರಗಳ ನಡುವಿನ ಕಾಲೂರು ಗ್ರಾಮದಲ್ಲಿ ಭಾರತೀಯ ವಿದ್ಯಾಭವನ-ಇನ್ಪೋಸೀಸ್ ಫೌಂಡೇಷನ್‌ಗಳ ೮೨ನೇ ಸಾಂಸ್ಕೃತಿಕ ವಿಸ್ತರಣಾ ಯೋಜನೆ ಅಂಗವಾಗಿ ಆಯೋಜಿತ ಕಾರ್ಯಕ್ರಮದಲ್ಲಿ ಮಡಿಕೇರಿ ಮೂಲದ ಸಹೋದರರಾದ ವಿದ್ಯಾನ್ ಹೇಮಂತ-ಹೇರಂಬ ಅವರಿಂದ ಕೊಳಲು ವಾದನ ಮನಸೂರೆಗೊಂಡಿತು. ಮಡಿಕೇರಿಯ ಕಲಾವಿದ ಕೆ.ಎಸ್.ಸತ್ಯಪ್ರಸಾದ್ ಅವರ ಪುತ್ರರಾದ ಹೇಮಂತ, ಹೇರಂಬ ದೇಶದಲ್ಲಿಯೇ ಹೆಸರಾಂತ ಕೊಳಲು ವಾದನ ಕಲಾವಿದರಾಗಿದ್ದಾರೆ. ಸಹೋದರರು ನಡೆಸಿಕೊಟ್ಟ ೨ ಗಂಟೆ ಅವಧಿಯ ಕೊಳಲು ವಾದನ ವೀಕ್ಷಕರಿಗೆ ಕಲಾರಸದೌತಣ ನೀಡಿತು. ಮೃದಂಗದಲ್ಲಿ ಪುತ್ತೂರು ನಿಕ್ಷಿತ್, ಎ.ಚಿದಾನಂದ ನೆರವು ನೀಡಿದರು.