

ವಿಜಯಪುರ: ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆಗೊಳಿಸಲು ಆಗ್ರಹಿಸಿ ಫೆ. 14 ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಆರ್. ರೂಢಗಿ ಹಾಗೂ ಗೌರವಾಧ್ಯಕ್ಷ ಅರುಣ ಎಸ್. ಮಠ ತಿಳಿಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಾಗಿದೆ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿದಿರುವುದಾಗಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರು ವಿವಿಧ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಇದುವರೆಗೂ ಬಾಕಿ ಬಿಲ್ ಪಾವತಿಸಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರದ ಒತ್ತಡ ಹೇರಲು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 10ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಥಮ ದರ್ಜೆಯ 300 ಗುತ್ತಿಗೆದಾರರು ಸೇರಿ ಅಂದಾಜು 1,000 ಗುತ್ತಿಗೆದಾರರು ಇದ್ದಾರೆ. ಕಳೆದ ಮೂರು ವರ್ಷದಿಂದ ಎಲ್ಲ ಇಲಾಖೆಗಳಲ್ಲಿ ಅಂದಾಜು 2,975 ಕೋಟಿ ರೂಪಾಯಿಗಳ ಬಾಕಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಇದು ಹಿಂದಿನ ಬಿಜೆಪಿ ಸರ್ಕಾರದ ಕೊನೆ ಹಂತದ ಅವಧಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಈವರೆಗೆ ಕೈಗೊಂಡ ಬಿಲ್ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಯಾವುದೇ ಹೊಸ ಕಾಮಗಾರಿಗಳನ್ನೇ ಶುರು ಮಾಡಿಲ್ಲ. ಈಗ ಬಿಲ್ ಬಾಕಿಯಿಂದಲೂ ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಐ.ಎಂ. ಪಟ್ಟಣಶೆಟ್ಟಿ, ಕಾರ್ಯದರ್ಶಿ ಸುನೀಲ ಉಳ್ಳಾಗಡ್ಡಿ, ಪದಾಧಿಕಾರಿಗಳಾದ ಎಲ್.ಡಿ. ಮಡಗೊಂಡ, ರಮೇಶ ಪಾಟೀಲ, ಎಂ.ಆರ್. ತಾಂಬೋಳಿ, ಆರ್.ಬಿ. ಅಸ್ಕಿ, ಸಿದ್ದು ಬಿರಾದಾರ, ಸುಜಿತ್ ಬಿಂಜಲಭಾವಿ, ಜೆ.ಜಿ. ಕಲ್ಲೂರ, ಆರ್.ಎಂ. ಮಾವಿನಗಿಡದ, ಎ.ಎಸ್.ಬಿರಾದಾರ ಮತ್ತಿತರರಿದ್ದರು.