

ಹೊನ್ನಾವರ: ತಾಲೂಕಿನ ಅಧಿಕಾರಿಗಳು ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದೇ ಮಾಡುತ್ತಿದ್ದಾರೆ. ಮೇ 15ರಿಂದ ಜೂನ್ 14ರವರೆಗೆ ವರ್ಗಾವಣೆ ಇದೆ. ಕೆಲಸ ಮಾಡಲು ಆಸಕ್ತಿ ಇಲ್ಲದ ಅಧಿಕಾರಿಗಳು ವರ್ಗಾವಣೆ ತೆಗೆದುಕೊಳ್ಳಿ ಎಂದು ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.
ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಪ್ರಗತಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಂಡಿಸಿದರು. ಪ್ರತಿಕ್ರಿಯಿಸಿದ ಸಚಿವರು, ಈ ಬಾರಿ ತಾಲೂಕಿನಲ್ಲಿ 1223 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಶೇ. 100 ಫಲಿತಾಂಶ ಪಡೆದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಬೇಕು. ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಲ್ಲಿ ಸಮಸ್ಯೆ ಏನಿದೆ ಎಂಬುದನ್ನು ಗಮನಿಸಿ ಮುಂದೆ ಶೇ. 100 ಫಲಿತಾಂಶ ಗಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು 30ಕ್ಕೂ ಹೆಚ್ಚು ವರ್ಷಗಳಾದವು. ಈಗಲೂ ಕೆಲವು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಂಗನವಾಡಿಗಳಿಗೆ ಸ್ವಂತ ಜಾಗ ಮಂಜೂರಿ ಮಾಡಲು ಅರಣ್ಯ ಇಲಾಖೆ ಸಹಕರಿಸಬೇಕು ಎಂದು ತಾಕೀತು ಮಾಡಿದರು.
ಹೆಸ್ಕಾಂನ ರಾಮಕೃಷ್ಣ ಭಟ್ ಮಾತನಾಡಿ, ವಿದ್ಯುತ್ ಸಂಪರ್ಕ ಪಡೆಯುವವರು ‘ವಾಸ ಯೋಗ್ಯ ಪ್ರಮಾಣಪತ್ರವನ್ನು’ ಹೊಂದಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಈ ಪ್ರಮಾಣಪತ್ರವನ್ನು ಹೊಂದಿರದವರಿಗೆ ವಿದ್ಯುತ್ ಸಂಪರ್ಕ ನೀಡಲು ಆಗುವುದಿಲ್ಲ. ಸ್ಥಳಿಯ ಸಂಸ್ಥೆಗಳು ಪ್ರಮಾಣಪತ್ರ ನೀಡಿದಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದರು. ವಿದ್ಯುತ್ ಸೌಲಭ್ಯವು ಮೂಲ ಅವಶ್ಯಕತೆಯಾಗಿದೆ. ಜನರಿಗೆ ತೊಂದರೆ ಆಗಬಾರದು. ವಿದ್ಯುತ್ ಸೌಲಭ್ಯ ನೀಡಬೇಕು ಎಂದು ಸಚಿವರು ಸೂಚಿಸಿದರು.
ಮೀನುಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ 10 ಸಾವಿರ ಮನೆಗಳು ಮಂಜೂರಿ ಆಗಿವೆ. ಮತ್ಸ್ಯಾಶ್ರಯ ಯೋಜನೆಯಲ್ಲಿ ಅಗತ್ಯ ಮನೆಗಳನ್ನು ಫಲಾನುಭವಿಗಳಿಗೆ ನೀಡಬೇಕು ಎಂದರು.
ತಾಪಂ ಆಡಳಿತ ಅಧಿಕಾರಿ ಶಿವರಾಮ ಎಂ.ಆರ್., ತಹಸೀಲ್ದಾರ್ ಪ್ರವೀಣ ಕರಾಂಡೆ, ತಾಪಂ ಇಒ ಚೇತನಕುಮಾರ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಇತರರು ಉಪಸ್ಥಿತರಿದ್ದರು.
ಶರಾವತಿ ಯೋಜನೆ ಪ್ರಸ್ತಾವನೆ ಇಲ್ಲ
ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾವನೆಯೇ ಇಲ್ಲ. ಇಲ್ಲಿ ಸಂಘಟನೆ ಮಾಡಿಕೊಂಡು ಏನೇನೋ ಹೇಳುತ್ತಿದ್ದಾರೆ. ಅವರು ಹೇಳುತ್ತಿರುವುದು ಬೋಗಸ್. ಪ್ರಚಾರಕ್ಕಾಗಿ ಅವರು ಈ ವಿಷಯವನ್ನು ಹೇಳಿಕೊಳುತ್ತಿದ್ದಾರೆ ಎಂದು ಶರಾವತಿ ಆರತಿ ಸಮಿತಿಯ ಹೋರಾಟಕ್ಕೆ ಸಚಿವ ವೈದ್ಯ ತಿರುಗೇಟು ನೀಡಿದರು.
ಏಕವಚನದಲ್ಲಿ ತರಾಟೆಗೆ
ಮಾವಿನಕುರ್ವಾದ ವಾಟರ್‌ಪಾರ್ಕ್‌ಗೆ ಶರಾವತಿ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಸಲು ಹಿಂದೇಟು ಹಾಕುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೇಸು ಸುಬ್ಬಣ್ಣ ಬೆಂಗಳೂರು ಅವರ ಮೇಲೆ ಸಚಿವ ಮಂಕಾಳ ವೈದ್ಯ ಗರಂ ಆದರು. ‘ಮಾವಿನಕುರ್ವಾ ವಾಟರ್ ಪಾಕ್‌ನವರು ಅರ್ಜಿ ನೀಡಿದರೂ ನಿಮ್ಮಿಂದ ಸ್ಪಂದನೆ ಇಲ್ಲ. ನೀರು ಕೊಡಲು ಹಿಂದೇಟು ಹಾಕುತ್ತಿರುವ ನಿನ್ನ ಅಗತ್ಯವಿಲ್ಲ. ಸಭೆಯನ್ನು ಬಿಟ್ಟು ಹೋಗು’ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.