

ಮಂಜುನಾಥ ಸಾಯೀಮನೆ ಶಿರಸಿ
ನಗರಸಭೆ ಸಿದ್ಧಪಡಿಸಿದ ಕ್ರಿಯಾಯೋಜನೆಯ ಬಗ್ಗೆ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಜಾತ್ರೆಯ ವೇಳೆ ಸ್ವಚ್ಛತಾ ಕಾರ್ಯ ಮತ್ತು ಭಕ್ತರಿಗೆ ಸೌಲಭ್ಯ ಕಲ್ಪಿಸಲು ಖರ್ಚು ಮಾಡಿದ ಹಣದಲ್ಲಿ ನಾವು ಶೇ. 50ರಷ್ಟನ್ನು ನೀಡಬೇಕಿದೆ. ಈಗಾಗಲೇ 19.25 ಲಕ್ಷ ರೂ.ಗಳನ್ನು ನಾವು ಸಂದಾಯ ಮಾಡಿದ್ದೇವೆ ಎನ್ನುತ್ತದೆ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ.
ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ನಮಗೂ ಖರ್ಚಿದೆ. ಜಾತ್ರೆಯಿಂದ ನಮಗೆ ಬರುವ ಆದಾಯ ಸಹ ಕಡಿಮೆ. ಜಾತ್ರೆಯ ವೇಳೆ ದೇವಿ ಕೂಡ್ರುವ ಬಿಡ್ಕಿಬೈಲ್ ಗದ್ದುಗೆಯ ಸುತ್ತ ಈಗ ಜಾಗವೂ ಕಡಿಮೆ ಆಗಿದೆ. ಒಂದು ಕಾಲದಲ್ಲಿ 4.5 ಎಕರೆಯಷ್ಟಿದ್ದ ಜಾಗ ಈಗ 2.5 ಎಕರೆಗೆ ಕ್ಷೀಣಿಸಿದೆ. ಈ ಜಾಗದಲ್ಲಿ ನಾವು ಜಾತ್ರೆಯ ವೇಳೆ ಅಂಗಡಿಕಾರರಿಗೆ ತಾತ್ಕಾಲಿಕ ಹರಾಜು ನಡೆಸುತ್ತಿದ್ದರೂ ಬರುವ ಆದಾಯ ನಮಗೆ ಕಡಿಮೆ ಎಂಬುದು ದೇವಾಲಯದ ವಾದ. ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಂಬಂಧಪಟ್ಟ ಖರ್ಚಿನಲ್ಲಿ ಶೇ.50ರಷ್ಟನ್ನು ದೇವಾಲಯದಿಂದ ನೀಡಬೇಕು. ಆದರೆ, ಜಾತ್ರೆಯ ಹೆಸರಿನಲ್ಲಿ ನಗರಸಭೆ ಇಡೀ ನಗರದಲ್ಲೆಲ್ಲ ಕಾಮಗಾರಿಗೆ ಕ್ರಿಯಾ ಯೋಜನೆ ಹಮ್ಮಿಕೊಂಡಿದೆ ಎಂಬುದು ದೇವಾಲಯದ ಆಕ್ಷೇಪ.
ಈ ಕುರಿತಂತೆ ವಿಜಯವಾಣಿಯೊಂದಿಗೆ ಮಾತನಾಡಿರುವ ದೇವಾಲಯದ ಆಡಳಿತ ಧರ್ಮದರ್ಶಿ ಸುಧೀರ ಹಂದ್ರಾಳ, ಜಾತ್ರೆ ದಿನಾಂಕ ನಿಗದಿಗೊಂಡ ದಿನಾಂಕದಿಂದಲೂ ನಮ್ಮ ಖರ್ಚು ಆರಂಭಗೊಳ್ಳುತ್ತದೆ. ಹೊರಬೀಡುಗಳು, ರಥ ಕಟ್ಟುವಿಕೆ, ದೇವಿ ಗದ್ದುಗೆಗೆ ಕುಳಿತಾದ ಬಳಿಕ ಸಕಲ ವ್ಯವಸ್ಥೆಗಳು, ಜಾತ್ರೆ ಮುಕ್ತಾಯವಾದ ಬಳಿಕ ವಿಧಿ ವಿಧಾನಗಳ ಪೂರೈಕೆ ಎಲ್ಲ ಖರ್ಚುಗಳನ್ನೂ ನಿಭಾಯಿಸಬೇಕಾಗುತ್ತದೆ. ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ಸುಮಾರು 3 ಕೋಟಿ ರೂ.ಗಳಷ್ಟು ನಮಗೆ ಖರ್ಚು ಬರುತ್ತದೆ. ಇಷ್ಟೆಲ್ಲ ನಿಭಾಯಿಸಿ ನಾವು ಭಕ್ತರ ಸಲುವಾಗಿಯೇ ಅಲ್ಪ ಕಾಸನ್ನಾದರೂ ಉಳಿಸಿಕೊಳ್ಳಬೇಕಿದೆ. ಮಾರಿಕಾಂಬಾ ದೇವಾಲಯಕ್ಕೆ ಬರುವ ಭಕ್ತರಿಗೆ ವರ್ಷ ಪೂರ್ತಿ ಅನ್ನ ಸಂತರ್ಪಣೆ ಮಾಡುತ್ತಿದ್ದೇವೆ ಎನ್ನುತ್ತಾರೆ.
ಜಾತ್ರಾ ನೈರ್ಮಲ್ಯ ಖರ್ಚಿನ ಕ್ರಿಯಾ ಯೋಜನೆ ನಗರಸಭೆ ಮಾಡಿದೆ. ಆದರೆ, ಹಿಂದೆಲ್ಲ ಜಿಲ್ಲಾಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಬಳಸುವ ಹಣದಲ್ಲಿ ಶೇ. 50ರಷ್ಟನ್ನು ಮಾರಿಕಾಂಬಾ ದೇವಾಲಯದಿಂದ ಭರಣ ಮಾಡಬೇಕು ಎಂದು ಸೂಚಿಸಿದ್ದರು. ಕಳೆದ 10 ವರ್ಷಗಳ ಹಿಂದಿನವರೆಗೂ ಇದೇ ನಡೆದುಕೊಂಡು ಬಂದಿದ್ದು, ಪ್ರತಿ ಜಾತ್ರೆಯ ಬಳಿಕ 3ರಿಂದ 4 ಲಕ್ಷ ರೂ.ನಷ್ಟು ನಗರಸಭೆಗೆ ತುಂಬಬೇಕಾಗಿತ್ತು. ಈಗ ಕೆಲ ವರ್ಷಗಳಿಂದ ಈ ಹಣ 15 ಲಕ್ಷಕ್ಕೆ ಏರಿದೆ. ಕಳೆದ ಜಾತ್ರೆಯಲ್ಲಿ ಈ ಮೊತ್ತ 55 ಲಕ್ಷಕ್ಕೇರಿಸಿದ್ದಾರೆ. ಇಷ್ಟೆಲ್ಲ ಭಕ್ತರ ಹಣವನ್ನು ನಾವು ಹೇಗೆ ನೀಡಬೇಕು ಎಂಬುದು ದೇವಾಲಯದ ಆಡಳಿತ ಮಂಡಳಿ ಪ್ರಶ್ನೆ. ಮಾರಿಕಾಂಬಾ ದೇವಾಲಯ ಜಿಲ್ಲಾ ನ್ಯಾಯಾಧೀಶರ ಅಧೀನಕ್ಕೊಳಪಟ್ಟಿದೆ. ಹೀಗಾಗಿ, ನ್ಯಾಯಾಧೀಶರ ಸಲಹೆ ಪಡೆದ ದೇವಾಲಯದ ಆಡಳಿತ ಮಂಡಳಿ 19.25 ಲಕ್ಷ ರೂ. ಚೆಕ್ನ್ನು ನಗರಸಭೆಗೆ ಸಂದಾಯ ಮಾಡಿದೆ.
ಜಾತ್ರೆಯ ವೇಳೆ ನಗರದಲ್ಲಿ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಜಾತ್ರಾ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿತ್ತು. ಶಾಸಕರ ಸಾಮರ್ಥ್ಯಕ್ಕೆ ಅನುಗುಣವಾಗಿ 2ರಿಂದ 3 ಕೋಟಿ ರೂ.ವರೆಗೂ ಅನುದಾನ ಬಿಡುಗಡೆ ಆಗುತ್ತಿತ್ತು. ಈ ಹಣವನ್ನು ನಗರದ ಎಲ್ಲ 31 ವಾರ್ಡ್ಗಳಿಗೂ ಹಂಚಿಕೆ ಮಾಡಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿತ್ತು. ಆದರೆ, 2022ರಿಂದ ಈ ಅನುದಾನ ಬಿಡುಗಡೆ ಆಗುತ್ತಿಲ್ಲ. ಕಳೆದ ಜಾತ್ರೆಯಲ್ಲಿ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ರಾಜ್ಯ ಸರ್ಕಾರದಿಂದ ನಗರಸಭೆಗೆ ಪತ್ರ ಬಂದಿದೆ. ಆದರೆ, ಅನುದಾನ ಬಿಡುಗಡೆ ಇನ್ನೂ ಬಾಕಿ ಇದೆ. ಆದರೆ, ನಗರಸಭೆಯ ಕಾಂಗ್ರೆಸ್ ಸದಸ್ಯರ ಇದಕ್ಕೆ ಆಕ್ಷೇಪಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ 5 ಕೋಟಿ ರೂ. ಜಾತ್ರಾ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, 3.5 ಕೋಟಿ ರೂ. ಬಿಡುಗಡೆ ಆಗಿದೆ ಎನ್ನುತ್ತಿದ್ದಾರೆ. ಈ ಕುರಿತಂತೆ ನಗರಸಭೆಯ ಸಾಮಾನ್ಯ ಸಭೆಗಳಲ್ಲಿಯೂ ಹಲವು ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾರಿಕಾಂಬಾ ದೇವಾಲಯ ಮತ್ತು ನಗರಸಭೆ ನಡುವಿನ ಹಗ್ಗ ಜಗ್ಗಾಟದಲ್ಲಿ ವೈಮನಸ್ಸು ಮೂಡದಂತೆ ನೋಡಿಕೊಳ್ಳಬೇಕಾಗಿದೆ. ಶಿರಸಿ ನಗರವಾಸಿಗಳ ಪಾಲಿಗೆ ಈ ಎರಡೂ ಕೇಂದ್ರಗಳು ಅತ್ಯಗತ್ಯ. ಮಾರಿಕಾಂಬಾ ದೇವಾಲಯ ಶ್ರದ್ಧಾ ಕೇಂದ್ರ, ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಜಾತಿ ಬೇಧ ಮರೆತು ಎಲ್ಲರೂ ಶ್ರಮಿಸುತ್ತಾರೆ. ಇನ್ನೊಂದೆಡೆ ಶಿರಸಿ ನಗರಸಭೆ ನಗರವಾಸಿಗಳ ಆರಾಧ್ಯ ಕೇಂದ್ರ. ಸ್ವಚ್ಛತೆಯಿಂದ ಆರಂಭಿಸಿ ಪ್ರತಿ ಸೌಲಭ್ಯಕ್ಕೆ ನಗರವಾಸಿಗಳು ನಗರಸಭೆಯನ್ನೇ ಆಶ್ರಯಿಸಬೇಕಾಗಿದೆ. ಈ ಹಗ್ಗ ಜಗ್ಗಾಟ ಇಲ್ಲಿಗೇ ನಿಲ್ಲಿಸಿ ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ನಗರವಾಸಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆಯ ಕ್ರಿಯಾಯೋಜನೆ ಕುರಿತು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ರ್ಚಚಿಸಿದ್ದೆವು. ನಗರಸಭೆ ಸಿಬ್ಬಂದಿಗೂ ಈ ಬಗ್ಗೆ ಕಲ್ಪನೆ ಇದ್ದು, ಕ್ರಿಯಾ ಯೋಜನೆಯ ಹಣದ ಬದಲು ಸ್ವಚ್ಛತಾ ಕಾರ್ಯಕ್ಕೆ ಬಳಸಿದ ಹಣದ ಶೇ. 50ರಷ್ಟನ್ನು ಮಾತ್ರ ನಗರಸಭೆಗೆ ಭರಣ ಮಾಡಬೇಕು. ಠರಾವು ಸ್ವೀಕಾರ ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು.| ಸುಧೀರ ಹಂದ್ರಾಳ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ.