

ಬಂಗಾರಪೇಟೆ: ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಒಂದು ಗಂಟೆ ಸಮಯ ಕಾದಿದ್ದರೂ ಪಿಡಿಒ ಮತ್ತು ಅಧ್ಯಕ್ಷರು ನಿಗದಿತ ಸಮಯಕ್ಕೆ ಸಭೆಗೆ ಆಗಮಿಸದಿರುವುದನ್ನು ಖಂಡಿಸಿ ಐವರು ಸದಸ್ಯರು ವಿಶೇಷ ಸಭೆ ಬಹಿಷ್ಕರಿಸಿ ಹೊರ ನಡೆದರು.
ಕ್ಷೇತ್ರದಾದ್ಯಂದ ನಡೆಯುತ್ತಿರುವ ಗ್ರಾಮಸಭೆ ಹಿನ್ನೆಲೆಯಲ್ಲಿ ಚರ್ಚಿಸಿ ಶಾಸಕರ ಸಭೆಯ ದಿನಾಂಕವನ್ನು ನಿಗದಿ ಮಾಡಲು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕಾರಹಳ್ಳಿ ಗ್ರಾಪಂ ಕೇಂದ್ರ ಕಚೇರಿಯಲ್ಲಿ ವಿಶೇಷ ಸಭೆ ನಿಗದಿಪಡಿಸಲಾಗಿತ್ತು. ಸಭೆಗೆ ಆಗಮಿಸುವಂತೆ ಪಿಡಿಒ ವೇಣು ಅವರು ಸದಸ್ಯರಿಗೆ ವಿಶೇಷ ಸಭೆಯ ಆಹ್ವಾನ ಪತ್ರಿಕೆ ಮೂಲಕ ಕೋರಿದ್ದರು.
ಪಿಡಿಒ ಅವರು ತಿಳಿಸಿರುವಂತೆ ಬೆಳಗ್ಗೆ 11ಗಂಟೆಗೆ ಸದಸ್ಯರಾದ ಕಾರಹಳ್ಳಿ ನಾರಾಯಣಸ್ವಾಮಿ, ಯಳಬುರ್ಗಿ ಕೃಷ್ಣ್ಣಮೂರ್ತಿ, ನೆರ್ನಹಳ್ಳಿ ನಾರಾಯಣಮ್ಮ, ರಾಧಮ್ಮ ಮರಗಲ್ ಶ್ರೀನಿವಾಸ್, ತಿಮ್ಮಾಪುರ ಗಿರಿಜಮ್ಮ ಮತ್ತು ಅಶ್ವಿನಿ ಬ್ಯಾಟಪ್ಪ ಆಗಮಿಸಿದ್ದರು.
ಮಧ್ಯಾಹ್ನ 12 ಗಂಟೆಯಾದರೂ ಪಿಡಿಒ ಮತ್ತು ಅಧ್ಯಕ್ಷರು ಸಭೆಗೆ ಆಗಮಿಸದೆ ಇರುವುದನ್ನು ಗಮನಿಸಿ ಆಕ್ರೋಶಗೊಂಡ ಸದಸ್ಯರು ಸಭೆಯನ್ನೇ ಬಹಿಷ್ಕರಿಸಿ ಹೊರಟು ಹೋದರು. ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿ ನಂತರ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸದಸ್ಯರು ಹೋಗಿ ನಿಗದಿತ ಸಮಯಕ್ಕೆ ಸಭೆಗೆ ಆಗಮಿಸದ ಪಿಡಿಒ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕಾರಹಳ್ಳಿ ನಾರಾಯಣಸ್ವಾಮಿ ಈ ಹಿಂದೆ ಅಧ್ಯಕ್ಷರಾಗಿದ್ದಾಗ ಒಳ ಒಪ್ಫಂದದಂತೆ 13 ತಿಂಗಳ ನಂತರ ರಾಜೀನಾಮೆ ನೀಡಿದ್ದರು. ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷರಾಗಲು ಯಳಬುರ್ಗಿ ಕ್ಷೇತ್ರದ ಸದಸ್ಯ ಕೃಷ್ಣ್ಣಮೂರ್ತಿ ಪ್ರಯತ್ನ ನಡೆಸಿದ್ದರು. ಆದರೆ ಕಾರಹಳ್ಳಿ ಕ್ಷೇತ್ರದ ಸದಸ್ಯ ಶ್ರೀನಿವಾಸ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದರು.
ಈ ಅಧ್ಯಕ್ಷ ಚುನಾವಣೆ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿತ್ತು. ಪಂಚಾಯಿತಿಯಲ್ಲಿ ಕಾಮಗಾರಿಗಳ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸದಸ್ಯ ಕೃಷ್ಣ್ಣಮೂರ್ತಿ ಲೋಕಾಯುಕ್ತ ಮತ್ತು ಜಿಪಂ ಸಿಇಒ ಅವರಿಗೆ ದೂರು ನೀಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.
ನರೇಗಾ ಕಾಮಗಾರಿ ಜೆಸಿಬಿ ಯಂತ್ರದ ಮೂಲಕ ನಡೆಸಿರುವ ಬಗ್ಗೆ ೋಟೋ, ವಿಡಿಯೋ ಸಮೇತ ಸಿಇಒ, ಇಒಗೆ ದೂರು ನೀಡಲಾಗಿತ್ತು. ಇಷ್ಟೆಲ್ಲಾ ಆದರೂ ಯಾವುದೇ ಕ್ರಮವಾಗಿಲ್ಲ ಅನ್ನೋದು ಕೃಷ್ಣಮೂರ್ತಿ ಅವರ ಆಪಾದನೆಯಾಗಿದೆ.
ಈ ಬೆಳವಣಿಗೆಗಳಿಂದ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಕೃಷ್ಣ್ಣಮೂರ್ತಿ ನೇತೃತ್ವದ ಐದು ಮಂದಿ ಸದಸ್ಯರ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ವಿಶೇಷ ಸಭೆಯ ಬಹಿಷ್ಕಾರ ಮೂಲಕ ಬೆಳಕಿಗೆ ಬಂದಿದೆ. ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಗೆ ಹಾಜರಾಗಿದ್ದ 14 ಸದಸ್ಯರ ಕೋರಂ ನೊಂದಿಗೆ ಸಭೆ ನಡೆಸಿದರು.
ರಾತ್ರಿ ಮಳೆಯಿಂದ ಕಾರಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಆಗಮಿಸಿ ಅಧ್ಯಕ್ಷರು ಮತ್ತು ಹಲವು ಸದಸ್ಯರೊಂದಿಗೆ ಸ್ಥಳಕ್ಕೆ ಹೋಗಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಿ ಬರುವಷ್ಟರಲ್ಲಿ ತಡವಾಗಿದೆ. ಇದರಲ್ಲಿ ಯಾವುದೇ ದುರುದೇಷವಿಲ್ಲ.
> ವೇಣು
ಪಿಡಿಒ, ಕಾರಹಳ್ಳಿ ಗ್ರಾಪಂ
15ನೇ ಹಣಕಾಸಿನ ಯೋಜನೆಯಡಿ 23 ಲಕ್ಷ ರೂ. ಹಣ ಡ್ರಾ ಮಾಡಿದ್ದಾರೆ. ವರ್ಗ ಒಂದರಲ್ಲೂ ಹಣ ಡ್ರಾ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯದೇ ಇದ್ದರೂ ಹಣ ಡ್ರಾ ಮಾಡಿ ಅವ್ಯವಹಾರ ನಡೆಸಲಾಗಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು.
> ಕೃಷ್ಣಮೂರ್ತಿ
ಸದಸ್ಯ, ಕಾರಹಳ್ಳಿ ಗ್ರಾಪಂ
ಪಂಚಾಯಿತಿಗೆ ಸಂಬಂಧಿಸಿದ ವರ್ಗ ಒಂದು ಮತ್ತು 15ನೇ ಹಣಕಾಸಿನ ಮಾಹಿತಿ ಕೇಳುತ್ತಿದ್ದರೂ ಪಿಡಿಒ ಕೊಡುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಬಗ್ಗೆಯೂ ಮಾಹಿತಿ ನೀಡದೆ ರ್ನಿಲಕ್ಷ$್ಯ ಮಾಡಿದ್ದಾರೆ.
> ರಾಧಮ್ಮ ಮರಗಲ್ ಶ್ರೀನಿವಾಸ್
ಸದಸ್ಯೆ, ಕಾರಹಳ್ಳಿ ಗ್ರಾಪಂ