

ಹಾನಗಲ್ಲ: ದಲಿತರ ಕುಂದುಕೊರತೆಗಳನ್ನು ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅತೃಪ್ತಿ ಹೊರಹಾಕಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಎಸ್.ರೇಣುಕಾ ಅಧ್ಯಕ್ಷತೆಯಲ್ಲಿ ಮಂಗಳವಾರ ದಲಿತ ಸಮುದಾಯದ ಕುಂದುಕೊರತೆ ಸಮಾಲೋಚನಾ ಸಭೆ ನಡೆಯಿತು.
ಆರಂಭದಲ್ಲಿ ಹನುಮಂತಪ್ಪ ಯಳ್ಳೂರ, ಮುಖಂಡರು ಮಾತನಾಡಿ, ಪಟ್ಟಣದಲ್ಲಿರುವ ಅಂಬೇಡ್ಕರ್ ಸಭಾಭವನವನ್ನು ದಲಿತರಿಗಾಗಿ ಮೀಸಲಿಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅನುದಾನದಲ್ಲಿ ನಿರ್ವಿುಸಿದ್ದರೂ ದಲಿತರ ಉಪಯೋಗಕ್ಕೆ ಬರುತ್ತಿಲ್ಲ. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಈ ಸಮಸ್ಯೆ ಪರಿಹರಿಸದ ಹೊರತು ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಭವನದ ಜಾಗ ಗ್ರಾಮದೇವಿ ದೇವಸ್ಥಾನದ ಆಸ್ತಿಯಾಗಿದೆ. ಕಟ್ಟಡ ಕಟ್ಟುವಾಗ ಜಾಗವನ್ನು ಪುರಸಭೆ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಪಡೆದಿಲ್ಲ. ಅದರ ದಾಖಲೆಗಳೂ ಇಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆಗಳಿವೆ ಎಂದು ತಹಸೀಲ್ದಾರರು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ ವಿವರಣೆ ನೀಡಿ, ಹೊಸ ಅಂಬೇಡ್ಕರ್ ಭವನ ನಿರ್ವಿುಸಲು ನಿವೇಶನಕ್ಕಾಗಿ ಪುರಸಭೆಗೆ ಮನವಿ ಮಾಡಲಾಗಿದೆ. ಶಂಕ್ರಿಕೊಪ್ಪ ಗ್ರಾಮದ ಅಂಬೇಡ್ಕರ್ ಭವನ ಹಾಗೂ ರೇಣುಕಾಚಾರ್ಯರ ಗುಡಿಯ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ವಿವರಿಸಿದರು.
ಶಂಕ್ರಿಕೊಪ್ಪ ಗ್ರಾಮದಲ್ಲಿ ದಲಿತರಿಗೆ ಅಘೊಷಿತ ಬಹಿಷ್ಕಾರ ಹಾಕಲಾಗಿದೆ. ನಮಗೆ ಕ್ಷೌರ ಮಾಡುತ್ತಿಲ್ಲ. ನ್ಯಾಯ ಒದಗಿಸಿಕೊಡಬೇಕು ಎಂದು ಮುಖಂಡರು ಮನವಿ ಮಾಡಿದರು. ಆಗ ತಹಸೀಲ್ದಾರ್ ಎಸ್.ರೇಣುಕಾ ಹಾಗೂ ತಾಪಂ ಇಒ ಪರಶುರಾಮ ಪೂಜಾರ, ಈ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಕೂಡಲೇ ದೂರು ನೀಡಿದರೆ, ಖುದ್ದಾಗಿ ನಿಂತು ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ಭೋವಿ ವಡ್ಡರ ಸಮುದಾಯದವರಿಗೆ ಗಣಿಗಾರಿಕೆಗೆ ಜಾಗ, ಸಮುದಾಯ ಭವನಕ್ಕೆ ನಿವೇಶನ, ಪಟ್ಟಣದಲ್ಲಿಯೇ ವಾಲ್ಮೀಕಿ ಭವನ ನಿರ್ವಣ, ಅಲೆಮಾರಿ ಜನಾಂಗದ ವಸತಿ ಸಮಸ್ಯೆ, ಅಕ್ಕಿಆಲೂರಿನಲ್ಲಿ ಕೊರಚ ಸಮುದಾಯದ ಗುಡಿಸಲು ನೆಲಸಮ, ಸ್ಮಶಾನ, ಕುಡಿಯುವ ನೀರಿನ ಸಮಸ್ಯೆ, ವಾಣಿಜ್ಯ ಮಳಿಗೆ ನೀಡುದಿರುವ ವಿಷಯಗಳು ಪ್ರಸ್ತಾಪವಾದವು.
ಮುಖಂಡರಾದ ಪುಟ್ಟಪ್ಪ ನರೇಗಲ್ಲ, ರಾಜು ಶಿರಪಂಥಿ, ರಾಮು ಯಳ್ಳೂರ, ಮಾರುತಿ ಪುರ್ಲಿ, ಕೊಟ್ರಪ್ಪ ಕುದರಿಸಿದ್ದನವರ, ಮಹೇಶ ಹರಿಜನ, ಸುರೇಶ ನಾಗಣ್ಣನವರ, ಹನುಮಂತಪ್ಪ ಕೋಣನಕೊಪ್ಪ, ನಿಂಗಪ್ಪ ಗಾಳೆಮ್ಮನವರ, ನಿಂಗಪ್ಪ ಹೊಸಮನಿ, ಉಮೇಶ ಮಾಳಗಿ, ನೀಲಪ್ಪ ದೊಡ್ಡಮನಿ, ಪರಶುರಾಮ ಹುಳ್ಳಿಕಾಶಿ, ಮಂಜು ಕರ್ಜಗಿ ಇತರರು ಅಹವಾಲು ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಬಸವರಾಜ ಹಳವಣ್ಣನವರ, ತಾಲೂಕು ಮಟ್ಟದ ಅಧಿಕಾರಿಗಳಾದ ರಾಮು ಬೈಲಸೀಮೆ, ದೇವರಾಜ ಎಸ್., ಚಂದ್ರಶೇಖರ ನೆಗಳೂರು, ಎಸ್. ಆನಂದ, ಗಣೇಶ ಶೆಟ್ಟರ್, ಗಿರೀಶ ರೆಡ್ಡೇರ, ಎ.ಪಿ. ಸುಗಂ ಇದ್ದರು.