ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ!

bjp
ತುಮಕೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿದ ಬಿಜೆಪಿ ಒಬಿಸಿ ಮುಖಂಡರು. ಅಂಬಿಕಾ, ಬಿ.ಕೆ.ಮಂಜುನಾಥ್​, ಲಕ್ಷಿ$್ಮಶ್​, ಶಂಕರಪ್ಪ, ಶಿವಪ್ರಕಾಶ್​ ಮತ್ತಿತರರ ಪ್ರಮುಖ ಮುಖಂಡರು ಇದ್ದರು.
Published on

ಒಬಿಸಿ ಮುಖಂಡರ ಪ್ರತ್ಯೇಕ ಸಭೆ > ಜಿಲ್ಲಾಧ್ಯಕ್ಷ ವಿರುದ್ಧ ಆಕ್ರೋಶ? > ತಾಲೂಕುವಾರು ಸಭೆಗೆ ತೀರ್ಮಾನ

ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ ಜತೆಗಿನ ಮೈತ್ರಿಯಿಂದ ಯಶಸ್ಸು ಕಂಡಿರುವ ಬೆನ್ನಹಿಂದೆಯೇ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರೆಲ್ಲ ತುಮಕೂರಿನಲ್ಲಿ ಒಟ್ಟಾಗಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ತುಮಕೂರಿನ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಬಿಜೆಪಿ ಹಿರಿಯ ಮುಖಂಡರಾದ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್​, ಮಾಜಿ ಜಿಲ್ಲಾಧ್ಯಕ್ಷರಾದ ಬಿ.ಕೆ.ಮಂಜುನಾಥ್​, ಲಕ್ಷಿಮಶ್​, ಹಿರಿಯ ಮುಖಂಡ ಶಂಕರಪ್ಪ, ಶಿವಪ್ರಕಾಶ್​, ಗೋಕುಲ ಮಂಜುನಾಥ್​ ಸೇರಿ ಜಿಲ್ಲೆಯೆಲ್ಲೆಡೆಯಿಂದ ಆಗಮಿಸಿದ್ದ ಒಬಿಸಿ ಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೆಲವು ಮುಖಂಡರು ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಒಬಿಸಿ ಮುಖಂಡರನ್ನು ಕಡೆಗಣಿಸಿ ಏಕಪಯವಾಗಿ ನಡೆದುಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿಯೂ ಬೇರೆ ಯಾವುದೇ ಮುಖಂಡರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡದೆ ಪಕ್ಷವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೋಡಿದ್ದರು ಎಂದು ದೂರಿದರು. ಒಬಿಸಿ ಸಮುದಾಯದ ಲಕ್ಷ್ಮೀಶ್​​​ ಜಿಲ್ಲಾಧ್ಯಕ್ಷರಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿದ್ದ ಹೆಬ್ಬಾಕ ರವಿಶಂಕರ್​ ಒಂದು ಸಭೆಗೂ ಹಾಜರಾಗದೆ ಅಸಹಕಾರ ನೀಡಿದರೂ ಈಗಲೂ ಒಬಿಸಿ ಸಮುದಾಯದ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್​, ಲೋಕಸಭೆ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಒಬಿಸಿ ಸಮುದಾಯಕ್ಕೆ ಅವಕಾಶ ನೀಡದೆ ಕೇವಲ ಮತಕ್ಕಾಗಿ ಇಟ್ಟುಕೊಳ್ಳಲಾಗಿದೆ ಎಂದು ಆಕ್ರೋಶ ಹೊರಹಾಕಿರುವುದು ಪಕ್ಷದಲ್ಲಿ ಬಂಡಾಯದ ಬಾವುಟ ಹಾರುವ ಮುನ್ಸೂಚನೆ ಎನ್ನಿಸಿದೆ.

ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಬಿಸಿ ಸಮುದಾಯಕ್ಕೆ 11 ವಿಧಾನಸಭಾ ಕ್ಷೇತ್ರಗಳಿದ್ದರೂ ಒಂದೂ ಟಿಕೆಟ್​ ನೀಡುತ್ತಿಲ್ಲ, ವಿಧಾನ ಪರಿಷತ್​, ಲೋಕಸಭೆ ಚುನಾವಣೆಯಲ್ಲಿಯೂ ಅವಕಾಶವಿಲ್ಲ. ಹಾಗಾಗಿ, ನಮ್ಮ ಹಕ್ಕುಗಳಿಗಾಗಿ ಎಲ್ಲ ಮುಖಂಡರು ಒಗ್ಗಟ್ಟಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಪ್ರಮುಖ ಮುಖಂಡರೊಬ್ಬರು "ವಿಜಯವಾಣಿ'ಗೆ ತಿಳಿಸಿದರು.

ಜಿಲ್ಲಾ ಬಿಜೆಪಿ ಕಾರ್ಯಚಟುವಟಿಕೆಗಳಿಂದ ಈಗಾಗಲೇ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ದೂರವೇ ಉಳಿದಿರುವ ನಡುವೆಯೇ ಒಬಿಸಿ ಮುಖಂಡರು ಪ್ರತ್ಯೇಕ ಸಭೆ ನಡೆಸಿರುವುದು ಶಿಸ್ತಿನ ಪಕ್ಷವೆಂದೇ ಹೇಳಿಕೊಳ್ಳುತ್ತಿರುವ ಬಿಜೆಪಿಯಲ್ಲಿ ಮುಜುಗರಕ್ಕೆ ಕಾರಣವಾಗಿದ್ದು, ಕಮಲ ಪಾಳಯದ ಮುಂದಿನ ರಾಜಕೀಯ ಚಟುವಟಿಕೆಗಳು ಕುತೂಹಲ ಮೂಡಿಸಿವೆ.

ಪಕ್ಷದ ಕಚೇರಿಯಲ್ಲಿ ಸಭೆಗೆ ಒಲ್ಲೆ: ಕಳೆದ ವಾರದಲ್ಲಿಯೇ ಸಾಂಕೇತಿಕವಾಗಿ ಸಭೆ ನಡೆಸಿದ್ದ ಒಬಿಸಿ ಸಮುದಾಯದ ಕೆಲವು ಮುಖಂಡರು, ಜು.15ರಂದು ಜಿಲ್ಲೆಯ ಎಲ್ಲ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸುವ ದಿನಾಂಕ ನಿಗದಿಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿಸಿದ್ದ ಜಿಲ್ಲಾ ಬಿಜೆಪಿ ಮುಖಂಡರು ಬಿಜೆಪಿ ಕಚೇರಿಯಲ್ಲಿಯೇ ಸಭೆ ನಡೆಸುವಂತೆ ಮಾಡಿಕೊಂಡ ಮನವಿಗೆ ಒಬಿಸಿ ಮುಖಂಡರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಬಿಜೆಪಿ ಜಿಲ್ಲಾ ಟಕದ ವಿರುದ್ಧವೇ ನಮ್ಮ ಅಸಮಧಾನವಿದ್ದು, ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದರೆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರತ್ಯೇಕವಾಗಿಯೇ ಸಭೆ ನಡೆಸುವ ಮೂಲಕ ಅಸಮಾಧಾನದ ಸಂದೇಶವನ್ನು ವರಿಷ್ಠರಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ಬಿಜೆಪಿಯಲ್ಲಿ ಒಬಿಸಿ ಮುಖಂಡರನ್ನು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಮುಖಂಡರೆಲ್ಲ್ಲ ಸೇರಿ ಸಭೆ ನಡೆಸಿದ್ದು, ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದೇವೆ. ಎಲ್ಲ ಚುನಾವಣೆಗಳಲ್ಲಿಯೂ ಒಬಿಸಿ ಮುಖಂಡರು ಹಾಗೂ ಮತದಾರರು ಮತ ನೀಡಲಷ್ಟೇ ಸೀಮಿತವಾಗಿದ್ದಾರೆ, ಅಧಿಕಾರದಲ್ಲಿ ಪಾಲು ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ, ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಎಲ್ಲ ತಾಲೂಕುಗಳಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಮುದಾಯಗಳ ಪಾಲು ಪಡೆಯಲು ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದೇವೆ.
| ಲಕ್ಷ್ಮೀಶ್​​ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net