ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ; ಪ್ರತಿಭಟನೆಯ ಎಚ್ಚರಿಕೆ

MDK07
Published on

ಮಡಿಕೇರಿ: ಕೊಡಗರಹಳ್ಳಿ ಗ್ರಾಮದ ಸ.ನಂ.೪೯/೧ ಜಾಗವನ್ನು ಮಾರಾಟ ಮಾಡಿದ ಮಾಲೀಕರು ಪ್ರಸ್ತುತ ಜಾಗದಲ್ಲಿ ವಾಸವಿರುವ ನಿವಾಸಿಗಳ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಸಂದಾನದ ಮೂಲಕ ಬಗೆಹರಿಸಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸುವುದಾಗಿ ಪ್ರಜಾ ಪರಿವರ್ತನ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಸ್.ಮುತ್ತಪ್ಪ ಎಚ್ಚರಿಕೆ ನೀಡಿದರು.


ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಗ್ರಾಮದ ಬೈತೂರಪ್ಪ ದೇವಾಲಯದ ಸಮೀಪ ಸ.ನಂ ೪೯/೧ರ ನಿವೇಶನವನ್ನು ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ವಿವಿಧ ವರ್ಗದ ೪೩ ಕುಟುಂಬಗಳಿಗೆ ಮಾರಾಟ ಮಾಡಿದ್ದಾರೆ. ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ. ನಿವೇಶನಕ್ಕೆ ಸಂಬಂಧಿಸಿದಂತೆ ೧೫ ಜನರಿಗೆ ಮಾತ್ರ ಹಕ್ಕು ಪತ್ರಗಳಿದ್ದು, ಉಳಿದ ೨೭ ಕುಟುಂಬಗಳಿಗೆ ಹಕ್ಕು ಪತ್ರ ನೀಡಿಲ್ಲ. ನಿವೇಶನ ಮಾರಾಟ ಮಾಡಿದ ಮಾಲಿಕರು ನಿವೇಶನ ಖರೀದಿ ವರ್ಗಾವಣೆಗೆ ಸಹಿ ಹಾಕಲು ಹೆಚ್ಚುವರಿಯಾಗಿ ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.


ನಿವೇಶನ ಮಾರಾಟ ಮಾಡುವ ಸಂದರ್ಭ ಮಾಲೀಕರು ನಿವೇಶನ ವರ್ಗಾವಣೆಯಾದ ಮೇಲೆ ನಿವೇಶನಕ್ಕೆ ತೆರವಳುವ ಮುಖ್ಯ ರಸ್ತೆಯಿಂದ ೨೦ ಅಡಿಗಳ ರಸ್ತೆಯನ್ನು ಬಿಟ್ಟುಕೊಡುವ ಭರವಸೆಯನ್ನು ನೀಡಿದ್ದರು. ಆದರೆ ಇದೀಗ ರಸ್ತೆ ಬಿಡಲು ಸಾಧ್ಯವಿಲ್ಲ. ಇದರ ಬಗ್ಗೆ ಮಾತನಾಡಲು ಬರಬೇಡಿ ಎಂದು ನಿವಾಸಿಗಳಿಗೆ ಎಚ್ಚರಿ ನೀಡಿದ್ದು, ನಿವಾಸಿಗಳ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.


ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಗ್ರಾಮಸ್ಥ ಎನ್.ವಿ.ಸಿದ್ದರಾಜು ಮಾತನಾಡಿ, ಸುಮಾರು ೮ ವರ್ಷದಿಂದ ಈ ಜಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಇತರರು ಈ ಜಾಗದಲ್ಲಿ ವಾಸವಿದ್ದು, ಮೂಲ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಈ ಹಿಂದೆ ಜನಪ್ರತಿನಿಧಿಗಳ ಅನುದಾನದಲ್ಲಿ ಕಲ್ಲಿನ ರಸ್ತೆ ನಿರ್ಮಾಣ ಮಾಡಲಾಗಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ಆದರೆ ಜಾಗದ ಮಾಲೀಕರು ರಸ್ತೆಗಳನ್ನು ನಾಶಪಡಿಸಿ, ನಿವಾಸಿಗಳಿಗೆ ಅನಾನುಕೂಲವಾಗುವಂತೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಉಂಟುಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಗಣೇಶ್, ಉಪಾಧ್ಯಕ್ಷ ಫಿರೋಜ್ ಖಾನ್, ಕೊಡಗರಹಳ್ಳಿ ಗ್ರಾಮಸ್ಥರಾದ ವೇದಾವತಿ, ಪಿ.ಸತೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net