ರಾಜ್ಯಾದ್ಯಂತ ಸರಕು ಸೇವೆಯಲ್ಲಿ ವ್ಯತ್ಯಯ:8 ಲಕ್ಷ ಲಾರಿಗಳು ಸ್ತಭ್ಧ

lorry strike1
Published on

ಬೆಂಗಳೂರು: ಡೀಸೆಲ್​, ಟೋಲ್​ ಮತ್ತು ಎಫ್​​​​​ಸಿ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಫೆಡರೇಷನ್​ ಆಫ್​​​ ಕರ್ನಾಟಕ ಸ್ಟೇಟ್​ ಲಾರಿ ಓನರ್ಸ್​ ಆಂಡ್​ ಏಜೆಂಟ್​ ಅಸೋಸಿಯೇಷನ್​ ಸೋಮವಾರದಿಂದ ಆರಂಭಿಸಿರುವ ಮುಷ್ಕರದಿಂದ ಸರಕು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘ, ದೆಹಲಿಯ ಎಐಎಂಟಿಸಿ, ಎಸ್​ಐಎಂಟಿಎ, ಬಿಸಿಟಿಎ, ಕೆಜಿಟಿಎ, ಎಲ್​ಪಿಜಿ ಟ್ಯಾಂಕರ್ಸ್​, ಏರ್​ಪೋರ್ಟ್​ ಟ್ಯಾಕ್ಸಿ, ಬಿಟಿಟಿಒಎ ಸೇರಿ ಎಲ್ಲ ಜಿಲ್ಲೆಗಳ ಲಾರಿ ಮಾಲೀಕರ ಸಂಘಗಳು ಸೇರಿ 162 ಸಂಘಟನೆಗಳು ಬೆಂಬಲ ನೀಡಿದ್ದು, ರಾಜ್ಯಾದ್ಯಂತ 8 ಲಕ್ಷ ಸಾಗಾಣಿಕೆ ವಾಹನಗಳು ಸ್ಥಗಿತವಾಗಿದ್ದವು.ಪ್ರತಿ ನಿತ್ಯ ಲಾಂತರ ಸರಕು ಸಾಗಾಣಿಕೆ ವಾಹನಗಳು ಬೆಂಗಳೂರಿಗೆ ಬಂದು ಹೋಗುತ್ತಿದ್ದವು. 5 ಸಾವಿರ ಲಾಜಿಸ್ಟಿಕ್​ ವಾಹನಗಳು ಸಂಚರಿಸುತ್ತಿದ್ದವು. 40 ಸಾವಿರ ಸಾಗಾಣಿಕೆ ವಾಹನಗಳು ಬೆಂಗಳೂರು ಮೂಲಕ ತಮಿಳುನಾಡು, ಕೇರಳ, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದವು. ಮುಷ್ಕರದಿಂದ ಇವೆಲ್ಲ ಲಾರಿಗಳ ಸ್ಥಗಿತವಾಗಿತ್ತು. ಇದರಿಂದ ಗ್ಯಾಸ್​, ಪಡಿತರ, ಮರಳು, ಜಲ್ಲಿಕಲ್ಲು ಸೇರಿ ಇತರೆ ಸರಕು ಸೇವೆಗಳ ಮೇಲೆ ಪರಿಣಾಮ ಬೀರಿತ್ತು. ಆದರೆ, ಹಾಲು, ಔಷಧ, ಅಡುಗೆ ಅನಿಲ, ಹಣ್ಣು, ತರಕಾರಿ, ಆಂಬುಲನ್ಸ್​, ಅಗ್ನಿಶಾಮಕ ಸೇವೆ ಸೇರಿ ದೈನಂದಿನ ಸೇವೆಗಳ ಪೂರೈಕೆ ಎಂದಿನಂತೆ ಇತ್ತು.

2024ರ ಜೂನ್​ನಲ್ಲಿ ರಾಜ್ಯ ಸರ್ಕಾರ ಪ್ರತಿ ಲೀ.ಡೀಸೆಲ್​ ಮೇಲೆ 3 ರೂ.ಹೆಚ್ಚಿಸಿತ್ತು. ಇದೀಗ ಯಾವುದೇ ಮೂನ್ಸೂಚನೆ ನೀಡದೆ ಏ.1ರಿಂದ ಏಕಾಏಕಿ 2 ರೂ.ದರ ಏರಿಸಿ ಲಾರಿ ಉದ್ಯಮದ ಮೇಲೆ ಬರೆ ಎಳೆಯಲಾಗಿದೆ. ರಾಜ್ಯದಲ್ಲಿ ಒಟ್ಟು 18 ರಾಜ್ಯ ಹೆದ್ದಾರಿ ಟೋಲ್​ಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಪ್ರತಿ ವಾಹನಕ್ಕೆ ರಸ್ತೆ ತೆರಿಗೆ, ಡೀಸೆಲ್​ ಮೇಲೆ ರಸ್ತೆ ಸೆಸ್​ ಕಟ್ಟುತ್ತಿದ್ದೇವೆ. ದೇಶದ ಯಾವುದೇ ರಾಜ್ಯಗಳಲ್ಲೂ ಟೋಲ್​ ಇರುವುದಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಮುಷ್ಕರದಲ್ಲಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಚೆಕ್​ಪೋಸ್ಟ್​ ರದ್ದುಗೊಳಿಸಿ:

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಬಾರ್ಡರ್​ ಚೆಕ್​ಪೋಸ್ಟ್​ ರದ್ದು ಮಾಡಲಾಗಿದೆ. ಏ.15ರಿಂದ ಮಹಾರಾಷ್ಟ್ರದ ಚೆಕ್​ಪೋಸ್ಟ್​ನ್ನು ಅಲ್ಲಿನ ಸರ್ಕಾರ ರದ್ದುಗೊಳಿಸಿದೆ. ಕರ್ನಾಟಕದ ಗಡಿ ಭಾಗದಲ್ಲೂ ಇಲ್ಲಿನ ಸರ್ಕಾರ ತೆಗೆದು ಹಾಕಬೇಕು. 15 ವರ್ಷ ಬಳಿಕ ಎಫ್​​​ಸಿ ಶುಲ್ಕವನ್ನು ಏಕಾಏಕಿ 15 ಸಾವಿರ ರೂ.ಏರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಶುಲ್ಕವು ರಾಜ್ಯ ಹಣಕಾಸಿಗೆ ಸಂಬಂಧಪಟ್ಟಿರುವ ಹಿನ್ನೆಲೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಾರದು ಸಂಘದ ಅಧ್ಯಕ್ಷ ಡಾ.ಜಿ.ಆರ್​.ಷಣ್ಮುಗಪ್ಪ ಒತ್ತಾಯಿಸಿದರು.

ಸಚಿವ ರಾಮಲಿಂಗಾರೆಡ್ಡಿ ನಮ್ಮ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನನ್ನ ವ್ಯಾಪ್ತಿಯ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ನಮ್ಮ ಸಮಸ್ಯೆಗಳನ್ನು ಅದಷ್ಟೂ ಬೇಗ ಈಡೇರಬೇಕು. ಡೀಸೆಲ್​ ದರ ಕಡಿಮೆ ಮಾಡಬೇಕು. ಬೆಂಗಳೂರು ಸೇರಿ ರಾಜ್ಯದ ಹಲವು ನಗರದ ಒಳಗಡೆ ಸರಕು ಸಾಗಾಣೆ ವಾಹನಗಳನ್ನು ನಿಷೇಧಿಸಿ ಐದು ಗಂಟೆ ಮಾತ್ರ ಸಮಯ ನೀಡಲಾಗಿದೆ. ಈ ಆದೇಶದಿಂದ ಲಾರಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. "ನೋ ಎಂಟ್ರಿ' ಹೆಸರಿನಲ್ಲಿ ಪೊಲೀಸರು ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ.

| ಎಚ್​.ರಾಜೇಶ್​, ಪ್ರಧಾನ ಕಾರ್ಯದರ್ಶಿ.

ಬೆಂಗಳೂರು ಕಮರ್ಷಿಯಲ್​ ಟ್ರಕ್​ ಅಸೋಸಿಯೇಷನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net