ಸಾಲದ ಹಣಕ್ಕಾಗಿ ಅಂತ್ಯಕ್ರಿಯೆಗೆ ಅಡ್ಡಿ!

antyakriye
Published on

ಬೆಂಗಳೂರು: ಸಾಲದ ಹಣ ಮರುಪಾವತಿಸಿಲ್ಲ ಎಂದು ಗಲಾಟೆ ತೆಗೆದ ಸಾಲಗಾರ ತನ್ನ ಸಹಚರರ ಜತೆ ಸ್ಮಶಾನಕ್ಕೆ ಹೋಗಿ ಸಾಲ ಪಡೆದಿದ್ದ ಮಹಿಳೆಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಡಿಗೇಹಳ್ಳಿ ನಿವಾಸಿ ನಾರಾಯಣ ಎಂಬುವರು ದೂರು ಕೊಟ್ಟಿದ್ದಾರೆ. ಅದರನ್ವಯ ಅಂತಿಮಸಂಸ್ಕಾರಕ್ಕೆ ಅಡ್ಡಿಪಡಿಸಿದ ಕಾರ್ತಿಕ್​ಗೌಡ, ಆತನ ತಾಯಿ ನಳಿನಿ ಹಾಗೂ ನರಸಿಂಹ ಸೇರಿ 20ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಆರ್.ಎಂಸಿ ಯಾರ್ಡ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ನಾರಾಯಣ ಮತ್ತು ಜಯಮ್ಮ ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಫೆ.16ರಂದು ಮೃತಪಟ್ಟಿದ್ದರು. ಅಂದೇ ಸಂಜೆ 5 ಗಂಟೆಗೆ ಅವರ ಅಂತ್ಯಕ್ರಿಯೆ ನೆರವೇರಿಸಲು ತುಮಕೂರು ರಸ್ತೆಯಲ್ಲಿರುವ ಚಿತಾಗಾರಕ್ಕೆ ಸಂಬಂಧಿಕರು ತೆರಳಿದ್ದರು.

ಈ ವೇಳೆ ಅಲ್ಲಿಗೆ ತನ್ನ ಸಹಚರರೊಂದಿಗೆ ಬಂದ ಕಾರ್ತಿಕ್​ಗೌಡ, 35 ಲಕ್ಷ ರೂ. ಸಾಲ ಪಡೆದಿರುವ ಜಯಮ್ಮ ಹಿಂದಿರುಗಿಸಿಲ್ಲ. ಅದನ್ನು ತೀರಿಸುವವರೆಗೂ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಹಟ ಹಿಡಿದಿದ್ದ. ಆತನ ಮನವೊಲಿಸಲು ಮುಂದಾದ ಸಂಬಂಧಿಕರ ಮೇಲೂ ಹಲ್ಲೆ ಮಾಡಿದ್ದ.

ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಜಯಮ್ಮ ಅವರ ಪುತ್ರನನ್ನೂ ಬೆದರಿಸಿ, ಹಲ್ಲೆ ಮಾಡಲು ಯತ್ನಿಸಿದ್ದ. ಹಲ್ಲೆ ವೇಳೆ ಜಯಮ್ಮನ ಪುತ್ರ ಕಿರುಚಾಡಿದಾಗ ಹೆದರಿದ ಕಾರ್ತಿಕ್​ಗೌಡ ಮತ್ತು ಆತನ ಸಹಚರರು ಓಡಿ ಹೋಗಿದ್ದರು ಎಂದು ದೂರಿನಲ್ಲಿ ನಾರಾಯಣ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net