

ಕೊಪ್ಪಳ: ರಾಜ್ಯ ಸರ್ಕಾರವು ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡಿ ಬಡ, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರ ಮೇಲೆ ಹೊರೆ ಏರಿದೆ. ಸರ್ಕಾರಿ ಬಸ್ಗಳನ್ನೇ ಅವಲಂಬಿಸಿ ಅನೇಕ ಜನ ದಿನನಿತ್ಯ ಓಡಾಡುತ್ತಾರೆ. ಆದರೆ, ರಾಜ್ಯ ಸರ್ಕಾರವು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಯೋಜನೆಯಿಂದಾಗಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಬಂದರೂ ಬಸ್ಗಳ ಹೆಚ್ಚಳ ಮಾಡುತ್ತಿಲ್ಲ. ಅಲ್ಲದೇ ಬಸ್ಗಳು ತುಂಬಿಕೊಂಡೆ ಓಡಾಡುವುದರಿಂದ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ, ಕಾಲೇಜುಗಳಿಗೆ ಹಾಜರಾಗಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಸರ್ಕಾರವು ಕೂಡಲೇ ಬಸ್ಗಳನ್ನು ಹೆಚ್ಚಿಸಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.
ಬಸ್ ನಿಲ್ದಾಣದ ಬಳಿ ರಸ್ತೆ ತಡೆದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಚಾಲಕ ಶಶಾಂಕ್ ಪಾಟೀಲ್, ನಗರ ಕಾರ್ಯದರ್ಶಿ ಹಮ್ಮಿಗೇಶ ಎಸ್.ಪಿ, ತಾಲೂಕ ಸಂಚಾಲಕರಾದ ಗಣೇಶ್ ರಾಥೋಡ್, ಪ್ರಮುಖರಾದ ಕೃಷ್ಣ ಮುರಾರಿ, ಶಿವು ನವಲಿ, ಬಸವರಾಜ, ಲಕ್ಷ$್ಮಣ, ವೀರೇಂದ್ರ, ಸುದೀಪ, ಮನೋಹರ್, ರಾಧಿಕಾ, ರೇಣುಕಾ, ಪಲ್ಲವಿ, ತೇಜಸ್ವಿನಿ ತ್ರಿವೇಣಿ ಇತರರಿದ್ದರು.