ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕಡೆಗಣಿಸಿ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ

19CBP2(CSIground)
Published on

ಚಿಕ್ಕಬಳ್ಳಾಪುರ: ಸ್ಥಳೀಯ ಆಡಳಿತ ಸಂಸ್ಥೆಗಳ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕಡೆಗಣಿಸಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರಿಗೆ ದಂಡಾಸ್ತ್ರವನ್ನು ಬಳಸುತ್ತಿದ್ದು ಇದರ ಪ್ರಮಾಣವು ನೈರ್ಮಲ್ಯ ವಾತಾವರಣದ ದೃಷ್ಟಿಯಿಂದ ಮತ್ತಷ್ಟು ಹೆಚ್ಚಾಗಬೇಕಾಗಿದೆ.

ಕಳೆದ 2023 ನೇ ಸಾಲಿನ ಜೂನ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊರುತ್ತಿದ್ದಂತೆ ಡಾ ಎಂ.ಸಿ.ಸುಧಾಕರ್ ಕ್ಲೀನ್ ಸಿಟಿ ಯೋಜನೆ ಘೋಷಿಸಿದ್ದರು. ಅದರಂತೆ ಪ್ಲಾಸ್ಟಿಕ್ ಬಳಕೆ, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಬಳಿಕ ಕನ್ನಡ ರಾಜ್ಯೋತ್ಸವದ ದಿನದಂದು ಅಧಿಕೃತವಾಗಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯನ್ನಾಗಿ ಘೋಷಿಸಲಾಗಿತ್ತು. ಇಷ್ಟಾದರೂ ಎಲ್ಲೆಂದರಲ್ಲಿ ಕಸವನ್ನು ಎಸೆಯುವುದು ಮತ್ತು ನಿಷೇಧಿತ ಮಾರಕ ಉತ್ಪನ್ನವನ್ನು ಬಳಸುವ ಚಾಳಿ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ.

ಸ್ಥಳೀಯ ಆಡಳಿತ ಸಂಸ್ಥೆಗಳು ವೈಜ್ಞಾನಿಕ ಕಸ ವಿಲೇವಾರಿಯ ಬಗ್ಗೆ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ನಗರ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿಯೇ ರಾಜಾರೋಷವಾಗಿ ನಿಯಮಗಳ ಉಲ್ಲಂಘನೆಯಾಗುತ್ತಿದೆ.

*ಕಸ ಎಸೆಯುವವರಿಗೆ ಬಿಸಿ

ಜಿಲ್ಲಾ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ನಗರಸಭೆ ಮುಟ್ಟಿಸಿದೆ. ರಾತ್ರಿ ವೇಳೆ ಕಾರ್ಯಾಚರಣೆ ಕೈಗೊಂಡು ಕಸದೊಂದಿಗೆ ಬರುವ ಜನರಿಗೆ ದಂಡವನ್ನು ವಿಧಿಸಿದೆ. ಮೊದಲೇ ಗುರುತಿಸಿರುವ ರಾಶಿ ತ್ಯಾಜ್ಯದ ಬ್ಲಾಕ್ ಸ್ಪಾಟ್‌ಗಳ ಬಳಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ.

*ನಿರೀಕ್ಷೆಯ ಪ್ರಗತಿ ಕಡಿಮೆ

ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕೆಲಸವು ಕೇವಲ ಶಾಸ್ತ್ರಕ್ಕೆ ಎನ್ನುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಗತಿ ಕಡಿಮೆ ಇದೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ.

*ಎಲ್ಲೆಂದರಲ್ಲಿ ಕಸದ ರಾಶಿ

ವಿವಿಧ ಬಡಾವಣೆಗಳ ನಿವಾಸಿಗಳು ಮನೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ರಸ್ತೆ ಮತ್ತು ಚರಂಡಿ ಬದಿ, ಖಾಲಿ ನಿವೇಶನಗಳಲ್ಲಿ ಎಸೆದು ಕೈ ತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ತಾಂಡವವಾಡುತ್ತಿದ್ದು ನೈರ್ಮಲ್ಯ ಹದಗೆಡಲು ಪ್ರಮುಖ ಕಾರಣವಾಗಿದೆ.

ಸ್ಥಳೀಯ ಆಡಳಿತ ಸಂಸ್ಥೆಯ ಸಿಬ್ಬಂದಿ ಮನೆ ಮನೆಗೂ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಬಹುತೇಕ ಜನರು ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದರಿಂದ ಪ್ರಮುಖ ವೃತ್ತಗಳು, ರಸ್ತೆಗಳ ಬದಿಯಲ್ಲಿ ತ್ಯಾಜ್ಯದ ರಾಶಿಗೆ ಅನೈರ್ಮಲ್ಯದ ವಾತಾವರಣ ಕಂಡು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net