

ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮತ್ತು ಅಡ್ಡ ಮತದಾನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ವರ್ಷಗಳಲ್ಲಿ ಎರಡು ಭಿನ್ನ ಆದೇಶ ಹೊರ ಬಿದ್ದಿದ್ದು ವಾದ ಪ್ರತಿವಾದಗಳು ಚರ್ಚೆಗೆಗ್ರಾಸವಾಗಿವೆ.
2024 ರ ಸೆ.17 ರಂದು ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ
ಮಾ.21 ರಂದು ಚಿಕ್ಕಬಳ್ಳಾಪುರ ನಗರಸಭೆಯ 6 ಸದಸ್ಯರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ 2020 ರ ಅ.31ರಂದು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಕ್ಕೆ ಸಂಬಂಧಿಸಿದಂತೆ ವಿಪ್ ಉಲ್ಲಂಘನೆ ಮತ್ತು ಪಕ್ಷಾಂತರ ವಿರುದ್ಧ ಕಾಯ್ದೆ ಅನ್ವಯ ದಾಖಲಾಗಿದ್ದ ಪ್ರಕರಣದಲ್ಲಿ 7 ಸದಸ್ಯರ ಅನರ್ಹತೆಗೊಳಿಸುವ ಮನವಿಯ ಅರ್ಜಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೂ ಆಗಿದ್ದ ಆರ್.ಲತಾ ವಜಾಗೊಳಿಸಿದ್ದರು. ಎರಡು ಪ್ರಕರಣದಲ್ಲೂ ಜಿಲ್ಲಾ ಕಾಂಗ್ರೆಸ್ ಸಮಿತಿಯೇ ಧಾವೆ ಸಲ್ಲಿಸಿತ್ತು. ಹಾಗೆಯೇ ನಗರಸಭೆಯ ಕಾಂಗ್ರೆಸ್ ಸದಸ್ಯರೇ ಪ್ರತಿವಾದಿಗಳಾಗಿದ್ದರು.
*ಎರಡರಲ್ಲೂ ಆರೋಪ ಒಂದೇ
ಜಿಲ್ಲಾಧಿಕಾರಿಗಳ ಮೆಟ್ಟಿಲೇರಿದ್ದ ಎರಡೂ ಪ್ರಕರಣದಲ್ಲಿ ಆರೋಪ ಒಂದೇ. ಸ್ವಪಯ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿ, ವಿಪ್ ಅನ್ನು ಉಲ್ಲಂಘಿಸಿರುವುದೇ ಆಗಿತ್ತು. ಪಕ್ಷದ ವರಿಷ್ಠರ ಆದೇಶವನ್ನು ಲೆಕ್ಕಿಸಿರಲಿಲ್ಲ. ರಾಜಾರೋಷವಾಗಿ ಸದಸ್ಯರು ಮಾತೃಪಕ್ಷಕ್ಕೆ ಕೈಕೊಟ್ಟಿದ್ದರು.
*ಹಳೇಯದರ ವಾದ ಪ್ರತಿವಾದ
ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸದಸ್ಯರ ಅನರ್ಹತೆ ಭೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪ್ ಹೊರಡಿಸಿದವರ ಅಧಿಕಾರದ ಪ್ರಶ್ನೆ ಮತ್ತು ನಿಯಮ ಉಲ್ಲಂಘನೆ, ಅನಾರೋಗ್ಯ ಸ್ಥಿತಿ, ರಾಜಕೀಯ ದುರುದ್ದೇಶ, ಪಕ್ಷ ವಿರೋಧಿ ಚಟುವಟಿಕೆಯ ವಾದ ಪ್ರತಿವಾದಗಳು ನಡೆದಿತ್ತು.
ಪಕ್ಷದ ನಿಯಮಾನುಸಾರ ವಿಪ್ ಹೊರಡಿಸಲಾಗಿದೆ. ಆದರೂ ದುರುದ್ದೇಶದಿಂದ ಎದುರಾಳಿ ಅಭ್ಯರ್ಥಿಯ ಗೆಲುವಿಗಾಗಿ ಸದಸ್ಯರು ದೂರ ಉಳಿಯುವಿಕೆ ಮತ್ತು ಚುನಾವಣೆಯಲ್ಲಿ ಅಡ್ಡ ಮತದಾನದ ತಂತ್ರ ಬಳಸಿದ್ದಾರೆ. ಇದಕ್ಕೆ ಪಕ್ಷ ವಿರೋಧಿ ಚಟುವಟಿಕೆಯ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ವಾದಿಸಿತ್ತು. ಮತ್ತೊಂದೆಡೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರೂ ಚುನಾವಣೆಗೆ ವಿಪ್ ಹೊರಡಿಸಲಾಗಿದೆ. ಇದರಲ್ಲಿ ನಿಯಮವನ್ನೂ ಪಾಲಿಸಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಹಕ್ಕು ಇಲ್ಲ ಎಂಬುದಾಗಿ ಅನರ್ಹತೆ ಭೀತಿಯಲ್ಲಿರುವ ಸದಸ್ಯರು ಪ್ರತಿವಾದ ಮಾಡಿದ್ದರು.
ಇದಕ್ಕೆ ಅಸಮರ್ಪಕ ವಿಪ್ ಜಾರಿ, ಸದಸ್ಯರಿಗೆ ವಿಪ್ ತಲುಪಿಸುವಲ್ಲಿನ ಲೋಪ, ವಿಪ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಹೆಸರು ನಮೂದು, ಪಕ್ಷದ ಹೈಕಮಾಂಡ್ ನಿಲುವಿನ ವಿಚಾರವಾಗಿ ಸಭೆ ಕರೆದು ಸದಸ್ಯರಲ್ಲಿ ಗೊಂದಲ ಬಗೆಹರಿಸದಿರುವಿಕೆ, ಕಾಂಗ್ರೆಸ್ ಸದಸ್ಯರಿಗೆ ಸ್ಪಷ್ಟ ನಿರ್ದೇಶನ ಸಿಗದಿರುವ ಅಂಶಗಳನ್ನು ಪರಿಗಣಿಸಿ, ಅನರ್ಹತೆಯ ಮನವಿಯನ್ನು ವಜಾಗೊಳಿಸಲಾಗಿತ್ತು.
*ಹೊಸದರ ವಾದ ಪ್ರತಿವಾದ
ಕಳೆದ 2024 ರ ಅ.4 ರಿಂದ ದೂರು ದಾಖಲಾಗಿ ಹಲವು ಬಾರಿ ಪ್ರಕರಣದ ವಿಚಾರಣೆ ನಡೆದಿದೆ. 2024 ರ ಸೆ.4 ರಂದು ವಿಪ್ ಜಾರಿ, ಪಕ್ಷದ ಅಧ್ಯಕ್ಷರ ಆದೇಶ, ಸದಸ್ಯರು ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಳಿಗೆ ಮತ ಚಲಾವಣೆ, ವಿಪ್ ಉಲ್ಲಂಘನೆಗೆ ರಾಜ್ಯದ ವಿವಿಧ ಪ್ರಕರಣಗಳಲ್ಲಿ ಸದಸ್ಯರನ್ನು ಅನರ್ಹಗೊಳಿಸಿರುವ ಅಂಶಗಳೊಂದಿಗೆ ದೂರುದಾರರು ವಾದ ಮಂಡಿಸಿದರೆ, ವಿಪ್ ಪತ್ರ ರವಾನೆಯ ವಿಳಾಸದ ವ್ಯತ್ಯಾಸ, ಸದಸ್ಯರ ಮನೆಗಳಿಗೆ ವಿಪ್ ಪತ್ರಗಳನ್ನು ಸರಿಯಾಗಿ ಅಂಟಿಸದಿರುವುದು, ವಿಪ್ ಜಾರಿಯ ಎಲ್ಲ ವಿಡಿಯೋ ಮತ್ತು ಪೋಟೋಗಳು ದೂರುದಾರರ ಸೃಷ್ಟಿಯ ಅಂಶಗಳೊಂದಿಗೆ ಪ್ರತಿವಾದಿಗಳು ಸಮರ್ಥಿಸಿಕೊಂಡಿದ್ದರು. ಎರಡೂ ಕಡೆ ವಾದ ಪ್ರತಿವಾದಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಪ್ ಉಲ್ಲಂಘನೆ, ಎದುರಾಳಿ ಪಕ್ಷದ ಜತೆ ಗುರುತಿಸಿಕೊಳ್ಳುವಿಕೆ, ಚುನಾವಣಾ ಪ್ರಕ್ರಿಯೆ ವೇಳೆ ಪಕ್ಷದ ಆದೇಶವನ್ನು ಧಿಕ್ಕರಿಸಿ ಮತ ಚಲಾವಣೆಯ ಸಂಪೂರ್ಣ ವಿಡಿಯೂ ಮತ್ತು ಲಿಖಿತ ದಾಖಲೆ(ಸಹಿ ನಮೂದು), ಪಕ್ಷದ ಹೈಕಮಾಂಡ್ ಪಾಂತರಿಗಳನ್ನು ಮನ್ನಿಸದ ರ್ನಿಣಯ, ವಿವಿಧ ನ್ಯಾಯಾಲಯಗಳಲ್ಲಿನ ಅನರ್ಹತೆಯ ತೀರ್ಪು ಸೇರಿದಂತೆ ಪ್ರಮುಖ ಅಂಶಗಳನ್ನು ಪರಿಗಣಿಸಿ 6 ಸದಸ್ಯರನ್ನು ಅನರ್ಹಗೊಳಿಸಲಾಗಿದೆ.