ಡಿಪಿಆರ್‌ನಲ್ಲಿರುವ ಕೆಲ ಅಂಶಗಳಿಗೆ ತಕರಾರು: ಟನಲ್ ಯೋಜನೆಗೆ ಟೆಂಡರ್​​ ಅನುಮಾನ

tunnel p
Published on

ಬೆಂಗಳೂರು: ಬಹುನಿರೀಕ್ಷಿತ ಸುರಂಗ ನಿರ್ಮಾಣ ಯೋಜನೆಗೆ ಈ ತಿಂಗಳಾಂತ್ಯದಲ್ಲಿ ಟೆಂಡರ್ ಅಧಿಸೂಚನೆ ಹೊರಡಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಾಲಿಕೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಆದರೆ, ಅಂತಿಮ ವಿಸ್ತೃತ ಯೋಜನಾ ವರದಿ (ಡಿಪಿಆರ್) ಯಲ್ಲಿ ಕೆಲವೊಂದು ಲೋಪ-ದೋಷಗಳು ಇಣುಕಿದ್ದು, ಅವುಗಳನ್ನು ನಿವಾರಿಸಿಕೊಂಡ ಬಳಿಕವೇ ಟೆಂಡರ್ ಆಹ್ವಾನಿಸುವ ಸಾಧ್ಯತೆ ಹೆಚ್ಚಿದೆ.

ಡಿಪಿಆರ್ ಸಿದ್ಧಪಡಿಸಿದ್ದ ದೆಹಲಿ ಮೂಲದ ಖಾಸಗಿ ಕಂಪನಿಯು ಕೆಲ ದತ್ತಾಂಶವನ್ನು ಅನ್ಯ ಯೋಜನೆಯಿಂದ ನಕಲು ಮಾಡಿ ಕಟ್ ಆ್ಯಂಡ್ ಪೇಸ್ಟ್ ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಕೆಲ ಸಂಘ-ಸಂಸ್ಥೆಗಳು ಈ ಲೋಪದ ಬಗ್ಗೆ ಸರ್ಕಾರ ಹಾಗೂ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದವು. ಕೋಟ್ಯಂತರ ರೂ. ಖರ್ಚು ಮಾಡಿ ಶ್ರೀಮಂತರಿಗೆ ಮಾತ್ರ ಟನಲ್ ರಸ್ತೆ ನಿರ್ಮಿಸುವುದರಿಂದ ನಗರದ ಸಂಚಾರ ದಟ್ಟಣೆ ನಿವಾರಿಸಲು ಸಾಧ್ಯವಿಲ್ಲ. ಸಮೂಹ ಸಾರಿಗೆಗೆ ಆದ್ಯತೆ ನೀಡಿದರೆ ಸುರಂಗ ರಸ್ತೆಯ ಅಗತ್ಯವೇ ಬಾರದು ಎಂದು ಪ್ರತಿಪಾದಿಸಿದ್ದವು.

ಈ ಬೆಳವಣಿಗೆ ಬೆನ್ನಲ್ಲೇ, ಡಿಸಿಎಂ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಪ್ಪುಗಳನ್ನು ಸರಿಪಡಿಸಿಕೊಂಡು 18 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ಗಾಗಿ 17,780 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲು ತಾಕೀತು ಮಾಡಿದ್ದರು. ಇದಕ್ಕೆ ಸಿದ್ಧತೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳ ತಂಡಕ್ಕೆ ದಿಢೀರ್ ಆಗಿ, ಮತ್ತೊಂದು ಲೋಪ ಆಗಿರುವ ಅಂಶವನ್ನು ಗಮನಿಸಿದ್ದಾರೆ. ಅದೇನೆಂದರೆ ನೆಲದಾಳದಲ್ಲಿ ಭೂಗರ್ಭಶಾಸದ ಅನ್ವಯ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸುವಾಗ ಈ ಹಿಂದೆ ಬಿಎಂಆರ್‌ಸಿಎಲ್ ಕೈಗೊಂಡಿರುವ ಅಧ್ಯಯನದ ಹಲವು ಅಂಶಗಳನ್ನು ಯಥಾವತ್ ಡಿಪಿಆರ್‌ನಲ್ಲಿ ನಮೂದಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದತ್ತಾಂಶ ಪುನರ್ ರೂಪಿಸಲು ಆಗ್ರಹ:

ಈ ವಿಚಾರವಾಗಿ ಪಾಲಿಕೆ ಮುಖ್ಯ ಇಂಜಿನಿಯರ್ ಹಾಗೂ ಅವರ ತಂಡವು ಡಿಪಿಆರ್ ಸಿದ್ಧಪಡಿಸಿರುವ ಕಂಪನಿಯಿಂದ ವಿವರಣೆ ಕೋರಿದ್ದಾರೆ. ಇದು ನಿಜವೆಂದು ಕಂಪನಿಯ ಪ್ರತಿನಿಧಿಗಳು ಮಾರುತ್ತರ ಕಳುಹಿಸಿದ್ದು, ಇದನ್ನು ಮೆಟ್ರೋದಿಂದಲೂ ಪರಾಮರ್ಶೆಗೆ ಒಳಪಡಿಸಲಾಗಿದೆ. ಇದು ಅಚಾತುರ್ಯದಿಂದ ಆದ ಕೆಲಸವಲ್ಲ, ಪ್ರಜ್ಞಾಪೂರ್ವಕವಾಗಿ ಅಧ್ಯಯನ ನಡೆಸದೆ ಕಾಟಾಚಾರಕ್ಕಾಗಿ ಡಿಪಿಆರ್ ರೂಪಿಸುವ ಭರದಲ್ಲಿ ಈ ತಪ್ಪುಗಳು ಆಗಿವೆ. ಹಾಗಾಗಿ ಮತ್ತೊಮ್ಮೆ ವೈಜ್ಞಾನಿಕವಾಗಿ ದತ್ತಾಂಶವನ್ನು ಪುನರ್ ರೂಪಿಸಬೇಕೆಂಬ ಕೂಗು ಪರಿಣಿತರಿಂದ ಕೇಳಿಬಂದಿದೆ.

ಡಿಪಿಆರ್ ಸಿದ್ಧಪಡಿಸಿರುವ ಕಂಪನಿಯಿಂದ ಎರಡನೇ ಬಾರಿ ತಪ್ಪು ಆಗಿಲ್ಲ. ಬಿಎಂಆರ್‌ಸಿಎಲ್ ಕೈಗೊಂಡಿದ್ದ ಅಧ್ಯಯನದ ಅಂಶವನ್ನು ತಾಳೆ ಹಾಕಲಷ್ಟೇ ವರದಿಯಲ್ಲಿ ನಮೂದಿಸಲಾಗಿದೆ. ಇದು ಅಧ್ಯಯನ ವರದಿಯ ಭಾಗ ಅಲ್ಲ. ಬೇರೆ ಬೇರೆ ಯೋಜನೆಗಳಿಗೆ ಮಾಡಲಾದ ಅಧ್ಯಯನವನ್ನು ತುಲನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಇದರಿಂದಾಗಿ ಟನಲ್ ಯೋಜನೆ ಜಾರಿಗೆ ಅಡ್ಡಿಯಾಗದು ಎಂಬ ಸಮಜಾಯಿಷಿ ಪಾಲಿಕೆ ಇಂಜಿನಿಯರ್‌ಗಳಿಂದ ವ್ಯಕ್ತವಾಗಿದೆ. ಈ ಸ್ಪಷ್ಟನೆ ಮಧ್ಯೆಯೂ ಡಿಪಿಆರ್‌ನಲ್ಲಿ ಇನ್ನುಳಿದ ಅಂಶಗಳನ್ನು ಮತ್ತೊಮ್ಮೆ ಪೂರ್ಣವಾಗಿ ಪರಾಮರ್ಶಿಸಿದ ಬಳಿಕವೇ ಟೆಂಡರ್ ಆಹ್ವಾನಿಸಲು ಅಧಿಕಾರಿಗಳು ನಿಲುವು ಕೈಗೊಂಡಿದ್ದು, ಈ ತಿಂಗಳಾಂತ್ಯದ ಬದಲು ಮಾರ್ಚ್‌ನಲ್ಲಿ ಟೆಂಡರ್ ಅಧಿಸೂಚನೆ ಹೊರಬೀಳಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net