ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ

30 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನ್ಯಾಯಾಲಯಗಳಲ್ಲಿ ಕಾಲಮಿತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗುವಂತೆ ಕ್ರಮವಹಿಸಿ, ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆಯಾಗಲು ಸಮರ್ಥ ಪುರಾವೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಸ್​ಸಿ, ಎಸ್​ಟಿ, ದೌರ್ಜನ್ಯ ತಡೆ ಕಾಯಿದೆ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
2014ರಿಂದ ಈವರೆಗೆ ಒಟ್ಟು 213 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 5 ಪ್ರಕರಣಗಳು ಇತ್ಯರ್ಥವಾಗಿದ್ದು, 208 ಪ್ರಕರಣಗಳು ಬಾಕಿ ಇವೆ. ಬಾಕಿ ಇರುವ ಪ್ರಕರಣಗಳ ಪೈಕಿ 18 ಪ್ರಕರಣಗಳಿಗೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಪ್ರತಿ ಪ್ರಕರಣವನ್ನು ಸೂಕ್ತವಾಗಿ ಪರಿಶೀಲಿಸಿ, ಆದಷ್ಟು ಬೇಗ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದರು.
ಅನುಕಂಪ ಆಧಾರಿತ ಉದ್ಯೋಗ ನೀಡಲು ವಿಳಂಬ ಮಾಡಬಾರದು. ಅರ್ಹರು ಇದ್ದಲ್ಲಿ ನಿಯಮಾವಳಿ ಪ್ರಕಾರ ತಕ್ಷಣ ಉದ್ಯೋಗ ನೀಡಲು ಕ್ರಮ ವಹಿಸಬೇಕು. ಭೂ ಒಡೆತನ ಯೋಜನೆ ಅನುಷ್ಠಾನಕ್ಕೆ ಅಗತ್ಯ ಭೂಮಿ ಗುರುತಿಸಿ, ಖರೀದಿಗೆ ಕ್ರಮವಹಿಸಬೇಕು. ಗ್ರಾಮೀಣ ಭಾಗದ ವಿವಿಧ ವಸತಿ ನಿಲಯಗಳಿಗೆ ನೇಮಕವಾದ ವಸತಿ ನಿಲಯ ಪಾಲಕರು ಕಡ್ಡಾಯವಾಗಿ ಹಾಸ್ಟೇಲ್​ಗಳಲ್ಲಿ ಇರಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್​. ಮೂಗನೂರಮಠ, ಡಿವೈಎಸ್​ಪಿ ಎಸ್​.ಎಂ.ನಾಗರಾಜ, ಸಹಾಯಕ ಪೊಲೀಸ್​ ಆಯುಕ್ತ ವಿಜಯಕುಮಾರ ಟಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್​ ದೇಸಾಯಿ, ತಹಸೀಲ್ದಾರ ಡಿ.ಎಚ್​.ಹೂಗಾರ, ಪ್ರಕಾಶ ನಾಶಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net