ಕಾನೂನು ಪ್ರಕಾರ ಕಡತಗಳ ವಿಲೇವಾರಿ

Ism_Disposal
Published on

ಪುತ್ತೂರು ಗ್ರಾಮಾಂತರ: ನಾನು ಶಾಸಕನಾಗುವ ವೇಳೆ 28 ಸಾವಿರ ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗದೆ ಬಾಕಿ ಇದ್ದವು. ಲಂಚ ನೀಡಿದವರ ಕಡತಗಳು ಮಾತ್ರ ವಿಲೇವಾರಿಯಾಗಿದೆ. ಆದರೆ ನಾನು ಶಾಸಕನಾದ ಬಳಿಕ ಪಕ್ಷಾತೀತವಾಗಿ ಎಲ್ಲರ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದೇನೆ. ರಾಜ್ಯದ ಯಾವ ಕ್ಷೇತ್ರದಲ್ಲೂ ನಡೆಯದ ಅಕ್ರಮ ಸಕ್ರಮ ಕಡತ ವಿಲೇವಾರಿ ಕಾರ್ಯ ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ನಿಮ್ಮ ಅರ್ಜಿಗಳು ಕಾನೂನು ಪ್ರಕಾರವಾಗಿದ್ದಲ್ಲಿ ಖಂಡಿತವಾಗಿಯೂ ಮಾಡಿ ಕೊಡುತ್ತೇನೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಕೊಳ್ತಿಗೆ ಗ್ರಾಪಂ ಸಭಾಂಗಣದಲ್ಲಿ ಏಳು ಗ್ರಾಮಗಳ ವ್ಯಾಪ್ತಿಯ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ ಜನಪರ ಹೊಸ ನಿಯಮದಂತೆ ಆ್ಯಪ್ ಮೂಲಕವೇ ಸದ್ಯ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗುತ್ತಿದ್ದು, ಇಲ್ಲಿ ಮಂಜೂರಾದ ಕಡತಗಳು ಪ್ಲಾಟಿಂಗ್ ಆಗಿಯೇ ಬರುವುದರಿಂದ ಜನರಿಗೆ ಪ್ಲಾಟಿಂಗ್ ಸಮಸ್ಯೆ ಇಲ್ಲ. ಅಕ್ರಮ ಸಕ್ರಮ ವಿಲೇವಾರಿಗಾಗಿ ಯಾರಿಗೂ ಹಣ ಕೊಡಬೇಡಿ ಎಂದು ಹೇಳುತ್ತಿದ್ದರೂ ತಮ್ಮ ಕೆಲಸಕ್ಕಾಗಿ ಕದ್ದುಮುಚ್ಚಿ ಲಂಚ ನೀಡುವವರು ಇನ್ನೂ ಇದ್ದಾರೆ. ಲಂಚ ವ್ಯವಸ್ಥೆ ಸಂಪೂರ್ಣವಾಗಿ ಕೊನೆಯಾಗಬೇಕಿದೆ ಎಂದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮತ್ತು ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು.

ಬಿಜೆಪಿ ಶಾಸಕರಿಗೆ ಮನವಿ

ಜಾತಿ, ಧರ್ಮದ ಹೆಸರಿನಲ್ಲಿ ಯುವಕರನ್ನು ಹುಚ್ಚೆಬ್ಬಿಸುವ ಬದಲು ಅವರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು. ಧರ್ಮ ದಂಗಲ್‌ಗೆ ಯುವಕರನ್ನು ಬಳಸಿ ಅವರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಬೇಡಿ, ಅವರಿಗೆ ಉತ್ತಮ ಬದುಕು ಕಟ್ಟಿ ಕೊಡಿ ಎಂದು ಬಿಜೆಪಿ ಶಾಸಕರುಗಳಿಗೆ ಮನವಿ ಮಾಡಿದ ಅಶೋಕ್ ಕುಮಾರ್ ರೈ ನಾನು ಶಾಸಕನಾದ ಬಳಿಕ ಉದ್ಯೋಗ ಮೇಳ ಮಾಡಿ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸಿದ್ದೇನೆ. ಆದರೆ ಮಾಜಿ ಶಾಸಕರು 5 ವರ್ಷದ ಅವಧಿಯಲ್ಲಿ ಯಾರಿಗಾದರೂ ಒಂದೇ ಒಂದು ಉದ್ಯೋಗ ಕೊಡಿಸಿದ್ದಾರೆಯೇ ಎಂದು ಕೆಣಕಿದರು.

ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಪುತ್ತೂರು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಶಾಸಕರ ಮುತುವರ್ಜಿಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಉಳಿದ ಯಾವ ವಿಧಾನಸಭಾ ಕ್ಷೇತ್ರದಲ್ಲಿಯೂ ಕಡತ ವಿಲೇವಾರಿಯಾಗಿಲ್ಲ. - ಪುರಂದರ ಹೆಗ್ಡೆ, ತಹಸೀಲ್ದಾರ್ https://www.vijayavani.net/crime-25 https://www.vijayavani.net/fulfilling-the-demand-of-drivers-for-years

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net