ಇ-ಖಾತಾ ಕಾಲಮಿತಿಯೊಳಗಾಗಿ ವಿಲೇವಾರಿ: ಪಾಲಿಕೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಈಗಾಗಲೇ ಶೇ.90 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ (ಕಂದಾಯ ವಿಭಾಗ) ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ನಗರದಲ್ಲಿ ಇ-ಖಾತಾ ಪಡೆಯುವ ಸಲುವಾಗಿ ನಾಗರಿಕರಿಗೆ ಅನುಕೂಲ ಕಲ್ಪಿಸಲು ಪಾಲಿಕೆಯಿಂದ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಸ್ವೀಕರಿಸಿದ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲಾಗುತ್ತಿದೆ. ಈವರೆಗೆ 46,962 ಅರ್ಜಿಗಳನ್ನು ಸ್ವೀಕರಿಸಿ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ ಎಂದು ಗುರುವಾರ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ 2,311 ಇ-ಖಾತಾ ನೀಡಲಾಗಿದೆ. ಎಲ್ಲ ವಲಯಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು 2-3 ದಿನಗಳಲ್ಲಿ ವಿಲೇ ಮಾಡಲು ಕ್ರಮವಹಿಸಲಾಗಿದೆ. ಪಾಲಿಕೆ ಎಂಟೂ ವಲಯಗಳಲ್ಲಿ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಹಾಗೂ ಹೆಚ್ಚುವರಿ ವಿಷಯ ನಿರ್ವಾಹಕರ ಲಾಗಿನ್ ಸೃಜಿಸಲಾಗಿದೆ. ಇದರ ಮೂಲಕ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡು ಜನರಿಗೆ ತ್ವರಿತವಾಗಿ ಅಂತಿಮ ಇ-ಖಾತಾ ವಿತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೂರುಗಳಿಗೆ ಸ್ಪಂದನೆ:

ಬಿಬಿಎಂಪಿಯ ಕಂದಾಯ ವಿಭಾಗದಿಂದ ಇ-ಖಾತಾ ಪಡೆಯಲು ನಾಗರಿಕ ಸಹಾಯವಾಣಿ ತೆರೆಯಲಾಗಿದೆ. ಯಾವುದೇ ನಾಗರಿಕರು ಸಹಾಯವಾಣಿ ಸಂಖ್ಯೆ 9480683695ಗೆ ಕರೆ ಮಾಡಿ ನೀಡುವ ದೂರುಗಳನ್ನು ಪರಿಗಣಿಸಿ ಕೂಡಲೆ ಬಗೆಹರಿಸಲಾಗುವುದು. ಇ-ಖಾತಾ ವಿಚಾರವಾಗಿ ಸಾರ್ವಜನಿಕರಿಗೆ ಯಾವುದೇ ಗೊಂದಲಗಳಿದ್ದರೂ, ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net