

ಹಾಸನ: ನಗರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಕಾರ್ಯ ಅಸಮರ್ಪಕವಾಗಿರುವುದರಿಂದ ನಿತ್ಯವೂ ನಗರದ ಗಾಳಿಗೆ ವಿಷ ಮಿಶ್ರಣವಾಗುವ ಪ್ರಮಾಣ ಹೆಚ್ಚುತ್ತಲೇ ಇದೆ.
ಹಸಿರು ನ್ಯಾಯಪೀಠವು ಘನತ್ಯಾಜ್ಯ ವಿಲೇವಾರಿ ವಿಷಯವಾಗಿ ಎಷ್ಟೇ ಮಾನದಂಡ ನಿಗದಿಪಡಿಸಿದರೂ, ಎಚ್ಚರಿಕೆ ನೀಡಿದರೂ ಈವರೆಗೂ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಲೇವಾರಿ ಕ್ರಮ ಅಳವಡಿಸಿಕೊಂಡಿಲ್ಲ. ಪರಿಣಾಮ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಸ್ತುಗಳನ್ನು ಎಸೆಯುವ, ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವ ಆಟೋಮೊಬೈಲ್ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ.
ಬೈಪಾಸ್ ರಸ್ತೆ ಡಂಪಿಂಗ್ ಯಾರ್ಡ್: ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಬೈಪಾಸ್ ರಸ್ತೆ ಬದಿಯ ಜಾಗ ಎಲ್ಲ ಬಗೆಯ ತ್ಯಾಜ್ಯವನ್ನು ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಬಳಕೆಯಾಗುತ್ತಿದೆ. ನಿರುಪಯುಕ್ತ ಗ್ರಾನೈಟ್ ಕಲ್ಲು, ಕಟ್ಟಡಗಳನ್ನು ಒಡೆದ ತ್ಯಾಜ್ಯ, ಮಾಂಸದಂಗಡಿಗಳ ಕಸ, ಫರ್ನಿಚರ್ ಅಂಗಡಿಗಳು ಹಾಗೂ ವಾಹನಗಳ ಹಳೇ ಟೈರ್, ಫೈಬರ್ ಬಾಡಿ ಬಿಡಿ ಭಾಗಗಳನ್ನು ಬೈಪಾಸ್ ರಸ್ತೆ ಬದಿಯ ಖಾಲಿ ಜಾಗಕ್ಕೆ ನಿರಂತವಾಗಿ ಸುರಿಯಲಾಗುತ್ತಿದೆ. ಇದರಿಂದ ರಸ್ತೆ ಬದಿಯ ತಗ್ಗು ತ್ಯಾಜ್ಯವಸ್ತುಗಳಿಂದ ಭರ್ತಿಯಾಗುತ್ತಿದೆ.
ತಮಾಷೆ ಎಂದರೆ ಈ ತ್ಯಾಜ್ಯ ಸಮಸ್ಯೆಯ ಗಂಭೀರತೆ ಅರ್ಥವಾದ ನಂತರ ರಸ್ತೆಯ ನಿರ್ವಹಣೆ ಹೊಣೆ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಇಲ್ಲಿ ಕಸ ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಿ ಕೈ ತೊಳೆದುಕೊಂಡಿದೆ. ಅದರ ಫಲಕದ ಪಕ್ಕದಲ್ಲಿಯೇ ನಿತ್ಯವೂ ಚೀಲಗಟ್ಟಲೆ ಕಸ ಎಸೆದು ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಆದರೂ ಪ್ರಾಧಿಕಾರ ಇದನ್ನು ತಡೆಯಲು ಒಂದು ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಈ ಸಂಬಂಧ ವಿಜಯವಾಣಿ ಪ್ರಾಧಿಕಾರದ ಹಾಸನ ಪಿಐಯುನ ಯೋಜನಾ ನಿರ್ದೇಶಕರ ಪ್ರತಿಕ್ರಿಯೆ ಬಯಸಿದಾಗ ಅವರು ವಿಷಯ ಗಮನಿಸದವರಂತೆ ವರ್ತಿಸಿದರು.
ದಟ್ಟ ಹೊಗೆ, ಪ್ರಾಣವಾಯುವಿಗೆ ವಿಷ: ನಿತ್ಯವೂ ಬೈಪಾಸ್ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಬೆಂಕಿ ಹಚ್ಚುವ ಕಿಡಿಗೇಡಿ ಕೆಲಸಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಾಯಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ರಾಸಾಯನಿಕ ಹಾಗೂ ಆಟೋಮೊಬೈಲ್ ತ್ಯಾಜ್ಯವನ್ನು ಸುಟ್ಟು ಹಾಕುವ ಕುಕೃತ್ಯದಿಂದ ನಿತ್ಯವೂ ನಗರ ಹಾಗೂ ಸುತ್ತಲಿನ ಪ್ರದೇಶದ ಪ್ರಾಣವಾಯುವಿಗೆ ಭಾರಿ ಪ್ರಮಾಣದ ವಿಷ ಮಿಶ್ರಣವಾಗುತ್ತಿದೆ.
ಕೆಲವೊಮ್ಮೆ ಭಾರಿ ಪ್ರಮಾಣದಲ್ಲಿ ಟೈರ್ ಮುಂತಾದ ನಿರುಪಯುಕ್ತ ವಸ್ತುಗಳನ್ನು ಎಸೆದು ಬೆಂಕಿ ಹಚ್ಚಿದಾಗ ಹಲವು ಕಿಲೋಮೀಟರ್‌ಗಳ ದೂರದವರೆಗೂ ಕಾಣಿಸುವಷ್ಟು ದಟ್ಟ ಕಪ್ಪು ಹೊಗೆ ಆಗಸದತ್ತ ಹೊರಡುತ್ತದೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿನ ಪ್ರಯಾಣಿಕರು ಉಸಿರಾಟದ ತೊಂದರೆ ಅನುಭವಿಸುವಷ್ಟು ಹೊಗೆ ದಟ್ಟವಾಗಿರುತ್ತದೆ.
ನಮ್ಮದಲ್ಲ ಇದು ನಮ್ಮದಲ್ಲ: ವಿಶೇಷವೆಂದರೆ ನಗರಸಭೆ ಕಚೇರಿಯಿಂದ 300 ಮೀ.ಗಳಷ್ಟು ದೂರವಿರುವ ಬೈಪಾಸ್ ರಸ್ತೆಯಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಮೊದಲು ಅದೇ ಕಚೇರಿಗೆ ಹೊಗೆ ಕಾಣಿಸುತ್ತದೆ. ಆದರೆ ಅದು ತಟ್ಟೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ ಎನ್ನುವ ಕಾರಣಕ್ಕಾಗಿ ಅಧಿಕಾರಿಗಳು ಬೈಪಾಸ್ ರಸ್ತೆ ವ್ಯಾಪ್ತಿಯ ಸ್ವಚ್ಛತಾ ಕಾರ್ಯ ನಮಗೆ ಸೇರಿದ್ದಲ್ಲ ಎನ್ನುತ್ತಾರೆ.
ಇಡೀ ಜಿಲ್ಲೆಯ ಮಾಲಿನ್ಯ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅವರ ಕಾರ್ಯ ವ್ಯಾಪ್ತಿಯ ಬಗ್ಗೆಯೇ ಸ್ಪಷ್ಟವಾದ ಅರಿವಿಲ್ಲ. ಹೀಗಾಗಿ ಅವರೂ ಅದು ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.
ಮಾಂಸದಂಗಡಿ ತ್ಯಾಜ್ಯ ವಿಲೇವಾರಿಗೂ ಮಾರ್ಗವಿಲ್ಲ: ನಗರ ಸುತ್ತಮುತ್ತಲಿನ ಎಲ್ಲ ರಸ್ತೆಗಳಲ್ಲಿಯೂ ದುರ್ವಾಸನೆಗೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿರುವುದು ಮಾಂಸದಂಗಡಿಗಳು. ಅದರಲ್ಲಿಯೂ ಕೋಳಿ ಮಾರಾಟಗಾರರು ಅಂಗಡಿಯಲ್ಲಿ ಉಳಿಯುವ ತ್ಯಾಜ್ಯವನ್ನೆಲ್ಲ ತಮ್ಮ ಬುದ್ಧಿವಂತಿಕೆ ಖರ್ಚು ಮಾಡಿ ರಸ್ತೆಗಳ ಬದಿಯಲ್ಲಿ ಎಸೆದು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಆದರೆ ಆ ರಸ್ತೆಗಳಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ತಿರುಗುವ ಸಮಸ್ಯೆ ಸೃಷ್ಟಿಸಿದ್ದಾರೆ.
ನಗರದ ಬೈಪಾಸ್ ರಸ್ತೆ, ವರ್ತುಲ ರಸ್ತೆಗಳಲ್ಲಿ ಕಸ ಎಸೆಯಲು ಜಾಗ ಉಳಿದಿಲ್ಲ ಎನ್ನುವಂತಾದ್ದರಿಂದ ಮಾಂಸಗದಂಗಡಿಗಳ ತ್ಯಾಜ್ಯವನ್ನು ನಗರ ಹೊರವಲಯದ ಬುರುಡಾಳು ಬೋರೆ ಅರಣ್ಯದ ಬಳಿ ರಾಷ್ಟ್ರೀಯ ಹೆದಾರಿ ಪಕ್ಕದಲ್ಲಿ ಎಸೆಯಲಾಗುತ್ತಿದೆ. ಇದರಿಂದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುತ್ತಮುತ್ತಲಿನ ವಾತಾವರಣ ಕಲುಷಿತವಾಗುತ್ತಿದೆ. ಅದೇ ತ್ಯಾಜ್ಯದ ಮೇಲೆ ಮಳೆ ನೀರು ಬಿದ್ದು, ಅದರಲ್ಲಿನ ಹಾನಿಕಾರಕ ಅಂಶಗಳು ಭೂಮಿಯೊಳಗಿಳಿದು ಅಂತರ್ಜಲ ಸೇರುವ ಪ್ರಕ್ರಿಯೆ ನಿರಂತವಾಗಿ ನಡೆಯುತ್ತಲೇ ಇದೆ.
ಶಿಕ್ಷೆಯ ಭಯವಿಲ್ಲ, ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ: ನಗರಸಭೆ ಹಾಗೂ ಗ್ರಾಮೀಣ ಸ್ಥಳೀಯ ಆಡಳಿತಗಳು ತ್ಯಾಜ್ಯ ವಿಲೇವಾರಿಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳದಿರುವುದೇ ಎಲ್ಲ ಸಮಸ್ಯೆಗೂ ಮೂಲವಾಗಿದೆ. ಕಸ ಸಂಗ್ರಹ ಹಾಗೂ ಅದರ ವಿಲೇವಾರಿಗೆ ಅಗತ್ಯವಾದ ಯಂತ್ರೋಪಕರಣ, ಮಾನವ ಶಕ್ತಿ ಲಭ್ಯವಿಲ್ಲದಿರುವುದರಿಂದ ದಿನದೂಡುವ ಕಾರ್ಯವನ್ನಷ್ಟೆ ಅಧಿಕಾರಿಗಳು ಮಾಡುತ್ತಿದ್ದಾರೆ. ನಿಯಮ ಮೀರಿ ಕಸ ಎಸೆಯುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನಗರದ ವಾತಾವರಣ ಕಲುಷಿತಗೊಳಿಸುತ್ತಿರುವವರು ಶಿಕ್ಷೆಯ ಭಯವಿಲ್ಲದೆ ತಮ್ಮಿಷ್ಟದಂತೆ ವರ್ತಿಸುವುದನ್ನು ಮುಂದುವರಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆ ದೊಡ್ಡ ಸಮಸ್ಯೆಯಾಗಿದೆ. ನಾವು ವಿಷವಾಗಿಸುತ್ತಿರುವುದು ನಾವೇ ಉಸಿರಾಡುವ ಗಾಳಿ, ನಾವೇ ಸೇವಿಸುವ ನೀರು, ಬದುಕುವ ಭೂಮಿ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಬೇಕಿದೆ. ಕೋಳಿ ಅಂಗಡಿಗಳ ತ್ಯಾಜ್ಯದಿಂದ ಲಾಭಕರವಾದ ಗೊಬ್ಬರ ಉತ್ಪಾದಿಸಲು ಸಾಧ್ಯವಿದೆ. ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಕಸಕ್ಕೆ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಅಂತಹ ಕುಕೃತ್ಯ ಹತ್ತಿಕ್ಕಬೇಕು.
ಧನಂಜಯ ಜೀವಾಳ, ಪರಿಸರವಾದಿ.
ಹಾಸನ ಬೈಪಾಸ್ ರಸ್ತೆಯಲ್ಲಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದನ್ನು ತಡೆಯುವ ಕೆಲಸ ನಮ್ಮ ವ್ಯಾಪ್ತಿಗೆ ಸೇರಿಲ್ಲ. ಆ ಕೆಲಸವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ಮಾಡಬೇಕು. ನಾವು ಕೆಲವು ದಿನಗಳ ಹಿಂದಷ್ಟೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೇನೆ. ಇಲ್ಲಿನ ಸಮಸ್ಯೆ ಬಗ್ಗೆ ಇನ್ನೂ ಅರಿಯಬೇಕಿದೆ.
ವೈ.ಎಸ್.ರಾಧಾ, ಪರಿಸರ ಅಧಿಕಾರಿ.
ಹಾಸನ ಬೈಪಾಸ್ ರಸ್ತೆಯಲ್ಲಿ ನಾನೂ ಓಡಾಡುತ್ತೇನೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚುವ, ಕಸ ಎಸೆಯುವ ಸಮಸ್ಯೆ ನನ್ನ ಅನುಭವಕ್ಕೂ ಬಂದಿದೆ. ಆ ಪ್ರದೇಶ ನಮ್ಮ ವ್ಯಾಪ್ತಿಗೆ ಸೇರಿಲ್ಲ. ಗ್ರಾಪಂ ಅಥವಾ ಎನ್‌ಎಚ್‌ಎಐ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಆರ್.ಕೃಷ್ಣಮೂರ್ತಿ, ನಗರಸಭೆ ಆಯುಕ್ತ.