

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಸೋಮವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಧಾರಾಕಾರ ಮಳೆಯಿಂದ ಕೆಲ ಬಡಾವಣೆಗಳಲ್ಲಿನ ಮನೆಗಳು ಜಲಾವೃತವಾಗಿ ಜನರು ಪರದಾಡುವಂತಾಗಿತ್ತು.
ಓಂ ನಗರ, ತಪೋವನನಗರದಲ್ಲಿ ಮಳೆ ನೀರು ಮನೆ ಸುತ್ತ ಆವರಿಸಿದ್ದರಿಂದ ಜನರು ಮನೆಯಿಂದ ಹೊರ ಬರಲು ಹರಸಾಹಸ ಪಡುವಂತಾಗಿತ್ತು. ತಪೋವನನಗರದ ಕೆಐಡಿಬಿ ಕಾಲನಿಯಲ್ಲಿ ಮನೆಗಳ ಪಕ್ಕದಲ್ಲಿ ನಿಮಿರ್ಸಿರುವ ಕಾಲುವೆ ಗುಣಮಟ್ಟದ್ದಾಗಿರದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಕಾಲುವೆಯಿಂದ ಸೋಕಿರುವ ನೀರು ಮನೆಗಳಲ್ಲಿನ ಕಾಂಪೌಂಡ್ಗೆ ಹರಿದು ಹೋಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಓಂ ನಗರದಲ್ಲಿನ ಮನೆಗಳು ಸಹ ಇಡೀ ರಾತ್ರಿ ಜಲಾವೃತವಾಗಿದ್ದವು. ಮಳೆ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಸುತ್ತಲಿನ ಪ್ರದೇಶದ ನೀರು ಈ ಬಡಾವಣೆಗೆ ಹರಿದು ಬಂದಿದೆ. ಮನೆ ಸುತ್ತ ಕೆರೆಯಂತಹ ವಾತಾವರಣ ನಿರ್ಮಾಣವಾಗಿದ್ದರಿಂದ ಜನರು ಮನೆಯಿಂದ ಹೊರ ಬಾರದಂತಾಗಿತ್ತು. ನೀರಿನಲ್ಲಿ ಹಾವು, ಚೇಳುಗಳು ಹರಿದಾಡಿದ್ದನ್ನು ಕಂಡ ಜನರು ಮತ್ತಷ್ಟು ಭಯ ಭೀತರಾಗಿದ್ದರು.
ಮಂಗಳವಾರ ಬೆಳಗ್ಗೆಯಿಂದ ಮಳೆ ಪ್ರಮಾಣ ತಗ್ಗಿದ್ದರಿಂದ ನೀರಿನ ಹರಿವು ಕಡಿಮೆಯಾಗಿದ್ದು, ಒಂದು ವೇಳೆ ಮತ್ತೆ ಧಾರಾಕಾರ ಮಳೆ ಸುರಿದರೆ ಬಡಾವಣೆಗಳ ಜನರು ಮನೆಯಲ್ಲೇ ಇರುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಸಿದರೆ ಇಂತಹ ಸ್ಥಿತಿ ಉದ್ಭವಿಸುವುದಿಲ್ಲ. ಮಳೆಗಾಲಕ್ಕೂ ಪೂರ್ವ ಸಂಬಂಧಿಸಿದ ಅಧಿಕಾರಿಗಳು ಇಂತಹ ಸ್ಥಳಗಳ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.