ಕರಾರಿನಂತೆ ಸಂಸ್ಕರಿಸಿದ ನೀರು ಹರಿಸಿ

web
Published on

ಸಚಿವ ಬೈರತಿ ಸುರೇಶ್​ ಸೂಚನೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತರಾಟೆ

ಕೋಲಾರ: ನಗರದ ಕೋರಮಂಗಲ ಮತ್ತು ಚಲ್ಲಟ್ಟದಿಂದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ 126 ಕೆರೆಗಳನ್ನು ತುಂಬಿಸಲು ಈ ಹಿಂದೆ ಆಗಿರುವ ಕರಾರಿನಂತೆ ನೀರನ್ನು ಹರಿಸಬೇಕು ಎಂದು ನಗರಾಭಿವೃದ್ದಿ ಸಚಿವ ಬಿ.ಎಸ್​. ಸುರೇಶ್​ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್​, ಕೋಲಾರ ಜಿಲ್ಲೆ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೆ.ಸಿ. ವ್ಯಾಲಿ ಸಂಸ್ಕರಣ ಟಕದಿಂದ ಕರಾರಿನಂತೆ 310 ದಶಲ ಲೀಟರ್​ ನೀರನ್ನು ಕೆರೆಗಳಿಗೆ ತುಂಬಿಸಬೇಕು ಎಂದು ತಾಕೀತು ಮಾಡಿದರು.
ಕಳೆದ ಕೆಲವು ತಿಂಗಳಿನಿಂದ 140 ದಶಲ ಲೀಟರ್​ ನೀರು ಮಾತ್ರ ನೀಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಒಂದು ವರ್ಷದಿಂದ ಸತತ ಬರಗಾಲವಿದ್ದು, ಮಳೆ ಪ್ರಮಾಣ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೋಲಾರ ಜಿಲ್ಲೆ ಮತ್ತು ಚಿಂತಾಮಣಿ ತಾಲೂಕಿನ ಕೆರೆಗಳಿಗೆ ಹರಿಸಬೇಕಾದ ಸಂಸ್ಕರಿಸಿದ ನೀರನ್ನು ಹೊಸಕೋಟೆ ಮತ್ತು ಆನೇಕಲ್​ ಪಟ್ಟಣಗಳಿಗೆ ಬಿಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಣ್ಣ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆ.ಸಿ. ವ್ಯಾಲಿ ತ್ಯಾಜ್ಯನಿರು ಸಂಸ್ಕರಣದ ಎರಡು ಟಕಗಳಲ್ಲಿ ಹೊಸ ಯಂತ್ರೋಪಕರಣಗಳಿವೆ. ಅದರಲ್ಲಿ ಒಂದು ದುರಸ್ತಿಯಲ್ಲಿದೆ ಎಂದು ಹೇಳುತ್ತೀರಿ ಇನ್ನೊಂದು ಯಂತ್ರದ ಮೂಲಕ ಆನೇಕಲ್​ ತಾಲೂಕಿಗೆ ಏಕೆ ನೀರು ಹರಿಸುತ್ತಿದ್ದೀರಿ ಎಂದು ಏರು ಧ್ವನಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಿಗೆ ಸಚಿವರು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವರಾದ ಬಿ. ಎಸ್​. ಸುರೇಶ ಮತ್ತು ಡಾ. ಎಂ. ಸಿ. ಸುಧಾಕರ್​, ಬೆಂಗಳೂರು ಜಲಮಂಡಳಿ ಅಧ್ಯ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮ್​ ಮನೋಹರ್​ ಪ್ರಸಾದ್​, ತ್ಯಾಜ್ಯನಿರನ್ನು ಸಂಸ್ಕರಿಸಿ ನೀರನ್ನು ಸಣ್ಣ ನೀರಾವರಿ ಇಲಾಖೆಯ ಕೆ.ಸಿ. ವ್ಯಾಲಿ ಘಟಕಕ್ಕೆ ಹರಿಸುವುದಷ್ಟೆ ನಮ್ಮ ಕೆಲಸ ಯಾವ ಜಿಲ್ಲೆಗೆ ಯಾವ ತಾಲೂಕಿಗೆ ಎಷ್ಟು ನೀರು ಹರಿಸಬೇಕು ಎಂಬುದು ನಮ್ಮ ಕೆಲಸವಲ್ಲ ಎಂದರು.


ಕೋಲಾರ ಜಿಲ್ಲೆಗೆ ಮೊದಲು ನೀರು ಹರಿಸಿ: ಸಚಿವಧ್ವಯರು ಸೇರಿ ಜಿಲ್ಲೆಯ ಶಾಸಕರು ಕೋಲಾರ ಜಿಲ್ಲೆಗೆ ಮೊದಲು ನೀರನ್ನು ಹರಿಸಿ ನಂತರ ಬೇಕಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಆನೇಕಲ್​ಗೆ ನೀಡಲಿ ಎಂದು ಒಕ್ಕೊರಲಿನಿಂದ ತಾಕೀತು ಮಾಡಿದರು. ಬೆಂಗಳೂರು ಜಲಮಂಡಳಿ ಕೈಗೆತ್ತಿಕೊಂಡಿರುವ 218 ದಶಲ ಲೀಟರ್​ ಸಂಸ್ಕರಣ ಟಕದ ಉನ್ನತಿಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಲಮಂಡಳಿ ಅಧ್ಯರಿಗೆ ಸಚಿವ ಸುರೇಶ ಸೂಚಿಸಿದರು.

ಸಚಿವ ಬೋಸರಾಜುಗೆ ಕರೆ: ಸಣ್ಣ ನೀರಾವರಿ ಸಚಿವ ಎನ್​.ಎಸ್​ ಬೋಸರಾಜುಗೆ ಕರೆ ಮಾಡಿದ ಸುರೇಶ ಮತ್ತು ಡಾ. ಎಂ.ಸಿ. ಸುಧಾಕರ್​, ಸಣ್ಣ ನೀರಾವರಿ ಇಲಾಖೆ ಮುಖ್ಯ ಅಭಿಯಂತ ಮತ್ತು ಅಧಿಕಾರಿಗಳು ಮಾಡಿರುವ ಅಚಾತುರ್ಯವನ್ನು ಗಮನಕ್ಕೆ ತಂದರು. ನಿಮ್ಮ ಇಲಾಖೆ ಮುಖ್ಯ ಅಭಿಯಂತರರು, ಅಧಿಕಾರಿಗಳು ಮೂಲ ಒಪ್ಪಂದ ಉಲ್ಲಂಸಿ ಕೋಲಾರ ಜಿಲ್ಲೆಗೆ ಹರಿಯುವ ಸಂಸ್ಕರಿಸಿದ ತ್ಯಾಜ್ಯನಿರಿನ ದೊಡ್ಡಕೊಳವೆಯಲ್ಲಿ ರಂಧ್ರ ಮಾಡುವ ಮೂಲಕ ಹೊಸಕೋಟೆ ತಾಲೂಕಿನ ಕೆರೆಗಳಿಗೆ ಹರಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೋಸರಾಜು, ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ಕರೆದು ಪರಿಶೀಲಿಸುವುದಾಗಿ ಹೇಳಿದರು. ಕೆ.ಸಿ. ವ್ಯಾಲಿ ಟಕದಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಕೋಲಾರ ತಾಲೂಕಿನ ನರಸಾಪುರ ಕೆರೆ ನಂತರ ಮಾಲೂರು ಕೆರೆಗಳು ತದನಂತರ ಬಂಗಾರಪೇಟೆ, ಕೆ.ಜಿ.ಎಫ್​., ಮುಳಬಾಗಿಲು ಮತ್ತು ಶ್ರೀನಿವಾಸಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕೆರೆಗಳಿಗೆ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್​ ಸದಸ್ಯ ನಸೀರ್​ಅಹಮದ್​, ಕೋಲಾರ ಜಿಲ್ಲೆಯ ಶಾಸಕರಾದ ಕೆ.ವೈ.ನಂಜೇಗೌಡ, ಎಸ್​.ಎನ್​. ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ, ಸಮೃದ್ಧಿ ಮಂಜುನಾಥ, ಎಂ.ಎಲ್​. ಅನಿಲ್​ ಕುಮಾರ್​, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪ ಚೋಳನ್​, ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷಾ, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ರಾವನ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net