ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ

22 njd news 02
ನಂಜನಗೂಡು ತಾಲೂಕು ಚುಂಚನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಸಿ.ಎಂ.ಮಹದೇವಯ್ಯ, ಅಧ್ಯಕ್ಷ ಅವಿನಾಶ್, ಶಶಿಕಲಾ ನಾಗೇಂದ್ರ, ಮಂಜುಳಾ ರಾಜಪ್ಪ ಇತರರು ಇದ್ದರು.
Published on

ನಂಜನಗೂಡು: ಅಜ್ಞಾನವೆಂಬ ಕತ್ತಲನ್ನು ಜ್ಞಾನವೆಂಬ ಬೆಳಕಿನಿಂದ ಹೋಗಲಾಡಿಸಬೇಕು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ್ ಹೇಳಿದರು.

ತಾಲೂಕಿನ ಚುಂಚನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಹಾರಾಜ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಬಿರಾರ್ಥಿಗಳು ಶ್ರಮವಹಿಸಿ ನಿಷ್ಠೆಯಿಂದ ಜನರೊಡನೆ ಬೆರೆತು ನಿಸ್ವಾರ್ಥದಿಂದ ಕೆಲಸ ನಿರ್ವಹಿಸಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿ ಕಂಡ ಕನಸು. ಹಳ್ಳಿಗಳಲ್ಲಿ ಇಂತಹ ಶ್ರಮದಾನ ನಡೆಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಭೇದ-ಭಾವ ಮರೆತು ನಿಸ್ವಾರ್ಥದಿಂದ ಆತ್ಮತೃಪ್ತಿಗಾಗಿ ಕೆಲಸ ನಿರ್ವಹಿಸಬೇಕು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ. ಮಹದೇವಯ್ಯ ಮಾತನಾಡಿ, ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳೆಯಲು, ವ್ಯಕ್ತಿತ್ವ ವೃದ್ಧಿಸಿಕೊಳ್ಳಲು, ಓದುವುದರ ಜತೆಗೆ ಸಮಾಜದ ಜವಾಬ್ದಾರಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಅವಶ್ಯವಾಗಿದೆ. ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವ ಎನ್‌ಎಸ್‌ಎಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕು. ವ್ಯಕ್ತಿತ್ವ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ. ಅದನ್ನು ಸಮಾಜದೊಂದಿಗಿನ ಒಡನಾಟದಿಂದ ರೂಪಿಸಿಕೊಳ್ಳಬೇಕು. ಸಮಾಜದೊಂದಿಗೆ ಬೆರೆಯಲು ಮತ್ತು ಅದನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಲು ಇಂತಹ ಚಟುವಟಿಕೆಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.

ಮಹಾರಾಜ ಕಾಲೇಜಿನ ಆಡಳಿತ ಅಧಿಕಾರಿ ಡಾ.ಕೆ.ತಿಮ್ಮಯ್ಯ ಮಾತನಾಡಿ, ಯುವ ಪೀಳಿಗೆ ಭಾರತ ದೇಶವನ್ನು ಮೌಢ್ಯಮುಕ್ತ ದೇಶವನ್ನಾಗಿ ಮಾಡಬೇಕು. ಯುವಕರು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇದಕ್ಕೆ ಎನ್ನೆಸ್ಸೆಸ್ ವೇದಿಕೆ ಸಹಕಾರಿಯಾಗಿದೆ. ವ್ಯಕ್ತಿ ವಿಕಸನ ಹೊಂದಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಕಲೆ, ಸಂಸ್ಕೃತಿಯನ್ನು ಉಳಿಸಬೇಕು. ಗ್ರಾಮವನ್ನು ಸ್ವಚ್ಛ ಮಾಡುವುದಲ್ಲದೆ ಗ್ರಾಮಸ್ಥರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷೆ ಶಶಿಕಲಾ ನಾಗೇಂದ್ರ, ಗ್ರಾ.ಪಂ. ಸದಸ್ಯರಾದ ಮಂಜುಳಾ ರಾಜಪ್ಪ, ಭಾಗ್ಯಾ ಮಹೇಶ್, ಡಿ.ಎಂ ಮಹದೇವು, ಗ್ರಾಮದ ಮುಖಂಡರಾದ ನಾಗಯ್ಯ, ರಾಜಶೇಖರ್, ಸಿ.ಎಂ ಸುರೇಶ್, ಎಸ್. ಮಹೇಶ್, ಕುಮಾರ್ ಶಿಕ್ಷಕರಾದ ಸತೀಶ್, ಪ್ರವೀಣ್ ಕುಮಾರ್, ಶಿಬಿರಾಧಿಕಾರಿಗಳಾದ ಡಾ.ಎಸ್. ಕೃಷ್ಣಪ್ಪ, ಡಾ.ಪಿ.ಎಸ್. ಮಧುಸೂದನ್, ಡಾ.ನಿಂಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net