

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಚಲನಚಿತ್ರ ನಟ ವಿನೋದ್‌ರಾಜ್ ಅವರು ಮಂಡ್ಯ ಜಿಲ್ಲೆಯ ಕೆಲ ಬರ ಪೀಡಿತ ಪ್ರದೇಶದಲ್ಲಿ ಜಾನುವಾರುಗಳಿಗೆ ರಾಗಿ ಮೇವು ರವಾನೆ ಮಾಡಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೆಲ ರೈತರು ಕರೆ ಮಾಡಿ, ಮೇವು ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಬಳಿ ರೈತರೊಬ್ಬರಿಂದ ಖರೀದಿಸಿದ್ದ ಮೇವನ್ನು ಮಂಗಳವಾರ ಕ್ಯಾಂಟರಲ್ಲಿ ತುಂಬಿ ರವಾನೆ ಮಾಡಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಕಾಡುತ್ತಿದೆ. ನೀರಿಗೆ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ಮೇವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಸಾಕಷ್ಟು ರೈತರ ಜಾನುವಾರುಗಳಿಗೆ ತೋಟದಿಂದ ಮೇವು ವಿತರಣೆ ಮಾಡಲಾಗಿದೆ. ಬರಗಾಲದ ಸಮಯದಲ್ಲಿ ಕೆಲವರು ನೀರು ಪೂರೈಕೆ ನೀಡಿ ಮಾನವೀಯತೆ ಮೆರೆದಿರುವುದು ಸಂತೋಷ. ಆದರೆ ಮೂಕ ಪ್ರಾಣಿಗಳಾದ ಜಾನುವಾರುಗಳ ಬಗ್ಗೆಯೂ ಯೋಚಿಸಬೇಕಾದ ಅನಿವಾರ್ಯತೆಯನ್ನು ಮನಗಂಡು 1 ಲಾರಿಯಷ್ಟು ರಾಗಿ ಹುಲ್ಲನ್ನು ಕಳುಹಿಸಿಕೊಡಲಾಗಿದೆ ಎಂದು ವಿನೋದ್‌ರಾಜ್ ತಿಳಿಸಿದರು.