

ಮಂಡ್ಯ: ತೀವ್ರ ವಿರೋಧದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಬೃಂದಾವನದಲ್ಲಿ ಸ್ಥಗಿತಗೊಂಡಿದ್ದ ಡಿಸ್ನಿಲ್ಯಾಂಡ್ ಯೋಜನೆ ಅನುಷ್ಠಾನಕ್ಕೆ ರಾಜ್ಯಸರ್ಕಾರ ಮತ್ತೆ ಉತ್ಸಾಹ ತೋರುತ್ತಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಇದರಿಂದಾಗಿ ಕೆಆರ್‌ಎಸ್ ಭಾಗದಲ್ಲಿ ಕುಟುಂಬಗಳಲ್ಲಿ ಆತಂಕದ ಕಾರ್ಮೋಡ ಆವರಿಸಿದಂತಾಗಿದೆ.
1,425 ಕೋಟಿ ರೂ ವೆಚ್ಚದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಮುಂದಾಗಿತ್ತು. ಅದರಲ್ಲಿಯೂ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿಕೆಶಿ ಕೂಡ ಹೆಚ್ಚಿನ ಉತ್ಸಾಹ ತೋರಿದ್ದರು. ಮಾತ್ರವಲ್ಲದೆ ಯೋಜನೆ ಬಗ್ಗೆ ಹಲವು ಬಾರಿ ಸಭೆ ಹಾಗೂ ಪರಿಶೀಲನೆ ಕೂಡ ನಡೆದಿತ್ತು. ಆದರೆ ಯೋಜನೆಗೆ ಕಾಂಗ್ರೆಸ್ ನಾಯಕರು ಸೇರಿದಂತೆ ಸಂಘಟನೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಯೋಜನೆ ಕೂಡ ಸ್ಥಗಿತಗೊಂಡಿತ್ತು.
ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅವರು ಕೆಆರ್‌ಎಸ್‌ನಲ್ಲಿ ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ನಿರ್ಮಾಣ ಮಾಡುವ ಸಂಬಂಧ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಹಾಗೂ ಯೋಜನೆಯ ವಿವರವನ್ನು ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಡಿಸಿಎಂ ಡಿಕೆಶಿ, 1,425 ಕೋಟಿ ರೂ ವೆಚ್ಚದಲ್ಲಿ ಯೋಜನೆ ಮಾಡುವ ಪ್ರಸ್ತಾವನೆ ಇದೆ. ಅಂತೆಯೇ ಯೋಜನೆಗೆ 198 ಎಕರೆ ಜಮೀನು ಅವಶ್ಯಕತೆ ಇದ್ದು, ಆ ಭೂಮಿಯು ಸರ್ಕಾರಿ ಸ್ವಾಮ್ಯದ್ದಾಗಿದೆ. ಇನ್ನು ಯೋಜನಾ ವರದಿಯು ಅನುಮೋದನಾ ಪ್ರಕ್ರಿಯೆಯಲ್ಲಿರುವುದರಿಂದ ಈ ಹಂತದಲ್ಲಿ ಕಂಪನಿ ಗುರುತಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಯೋಜನೆ ಕುರಿತಂತೆ ಯಾವುದೇ ಒಪ್ಪಂದವಾಗಿಲ್ಲ ಎಂದಿದ್ದಾರೆ. ಇದರಿಂದಾಗಿ ಸ್ಥಗಿತಗೊಂಡಿದ್ದ ಯೋಜನೆ ಮತ್ತೆ ಸದ್ದು ಮಾಡುವಂತಾಗಿದೆ.
ಯೋಜನೆಗೆ ವ್ಯಕ್ತವಾಗಿತ್ತು ವಿರೋಧ: ಡಿಸ್ನಿಲ್ಯಾಂಡ್ ಯೋಜನೆಗೆ ಅಂದು ಭಾರೀ ವಿರೋಧವೇ ವ್ಯಕ್ತವಾಗಿತ್ತು. ಪ್ರಮುಖವಾಗಿ 125 ಅಡಿ ಕಾವೇರಿ ಪ್ರತಿಮೆ ಮಾಡಲು 125 ಅಡಿ ಆಳದಿಂದ ಪಿಲ್ಲರ್ ಮಾಡಬೇಕು. ಆದ್ದರಿಂದ ಡಿಸ್ನಿಲ್ಯಾಂಡ್ ನಿರ್ಮಾಣವಾದಲ್ಲಿ ಅಣೆಕಟ್ಟೆಗೆ ಅಪಾಯವಿದೆ ಎನ್ನುವ ಆಗ್ರಹ ಕೇಳಿಬಂದಿತ್ತು. ಇದಕ್ಕೆ ಕಾಂಗ್ರೆಸ್ ಮುಖಂಡರು ಕೂಡ ದನಿಗೂಡಿಸಿದ್ದರು. ಜೈಪುರ ಮೂಲದ ಸಿನ್ಸಿಯರ್ ಆರ್ಕಿಟೆಕ್ಟ್ ಯೋಜನೆಯ ನೀಲನಕ್ಷೆ ತಯಾರಿಸಿದ್ದರು. ಇದಷ್ಟೇ ಅಲ್ಲದೆ ಡಿಸ್ನಿಲ್ಯಾಂಡ್‌ಗೆ 4 ಟಿಎಂಸಿ ನೀರು ಬೇಕಾಗಬಹುದು. 4 ಟಿಎಂಸಿ ನೀರನ್ನು ಉದ್ಯಾನ, ಹೋಟೆಲ್ ಮೊದಲಾದವುಗಳಿಗೆ ಬಳಸಲಾಗುತ್ತದೆ. ಅಲ್ಲಿ ಬಳಕೆಯಾಗುವ ನೀರಿನಲ್ಲಿ ಸ್ವಚ್ಛತೆೆ ಹೆಚ್ಚು ಅವಶ್ಯಕತೆ ಇರುತ್ತದೆ. ಸ್ವಚ್ಛ ಮಾಡಿದ ನೀರನ್ನು ಮತ್ತೆ ನದಿ ಅಥವಾ ನಾಲೆಗೆ ಬಿಡಬೇಕು. ಈಗಾಗಲೇ ನದಿಗೆ ನಗರ, ಪಟ್ಟಣ ಪ್ರದೇಶಗಳ ತ್ಯಾಜ್ಯ ಬಿಡುತ್ತಿರುವುದರಿಂದ ನದಿ ನೀರು ಸಾಕಷ್ಟು ಕಲುಷಿತವಾಗುತ್ತಿದೆ ಎನ್ನುವ ಆಕ್ರೋಶ ವ್ಯಕ್ತವಾಗಿತ್ತು. ಇದರ ಜತೆಗೆ ಯೋಜನೆ ಅನುಷ್ಠಾನದಿಂದ ಡ್ಯಾಂ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ತಿಂಡಿ ತಿನಿಸು ವ್ಯಾಪಾರ ಮಾಡುವ ತಳ್ಳುಗಾಡಿ, ಬೀದಿ ಬದಿ ವ್ಯಾಪಾರಿಗಳ ನೂರಕ್ಕೂ ಅಧಿಕ ಕುಟುಂಬದ ಆದಾಯಕ್ಕೆ ಹೊಡೆತ ಬೀಳಲಿದೆ. ಅಂತೆಯೇ ಇಡೀ ಪ್ರದೇಶ ಖಾಸಗಿ ತೆಕ್ಕೆಗೆ ಹೋದರೆ ವ್ಯಾಪಾರಕ್ಕೆ ಅವಕಾಶ ಸಿಗುವುದಿಲ್ಲ ಎನ್ನುವ ಆಕ್ರೋಶ ಹೊರಬಂದಿತ್ತು. ಮಾತ್ರವಲ್ಲದೆ ಕೋಟ್ಯಂತರ ರೂ ಖರ್ಚು ಮಾಡಿ ಡಿಸ್ನಿ ಮಾದರಿ ಅಭಿವೃದ್ಧಿಪಡಿಸುವ ಖಾಸಗಿ ಸಂಸ್ಥೆ ತನ್ನ ಹೂಡಿಕೆ ಹಿಂಪಡೆದುಕೊಳ್ಳಲು ಪ್ರವೇಶ ಶುಲ್ಕ ದುಬಾರಿ ಮಾಡಿದರೆ ಬಡವರಿಗೆ ಗಗನಕುಸುಮವಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು.