ಮತ ಕ್ಷೇತ್ರ ವಿಂಗಡಣೆ ಪಟ್ಟಿ ವಜಾ?

FotoJet (1)
Published on

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯ ನಂತರ ಕೋಲಾರ ಒಕ್ಕೂಟದ ನಿರ್ದೇಶಕ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು, ಮತ ಕ್ಷೇತ್ರಗಳನ್ನು ವಿಂಡಗಣೆ ಮಾಡಿ ಅಧಿಕಾರಿಗಳು ಹೊರಡಿಸಿದ್ದ ಪಟ್ಟಿಯನ್ನು ರಾಜ್ಯ ಹೈಕೋರ್ಟ್​ ಮಂಗಳವಾರ ವಜಾಗೊಳಿಸಿದೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಕ್ಷೇತ್ರಗಳನ್ನು ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ಪ್ರಶ್ನಿಸಿ, ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮರೆಡ್ಡಿ ಎಂಬುವರು ಕೋರ್ಟ್​ ಮೋರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಪಟ್ಟಿಯನ್ನು ವಜಾಗೊಳಿಸಿ ಆದೇಶಿಸಿದ್ದು, ನಿಯಮ ಪಾಲನೆ ಮಾಡಿ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ನ್ಯಾಯಾಲಯದ ಆದೇಶ ಕೈ ಸೇರಿದ 7 ದಿನಗಳ ಒಳಗಾಗಿ ಒಕ್ಕೂಟ ಸಾಮಾನ್ಯ ಸಭೆ ಕರೆಯಬೇಕು. ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಮಂಡಿಸಿ ಪ್ರತಿನಿಧಿಗಳಿಂದ ಅನುಮೋದನೆ ಪಡೆದುಕೊಳ್ಳಲು ಸೂಚಿಸಲಾಗಿದೆ ಎನ್ನಲಾಗುತ್ತಿದೆ.

ಕೋಲಾರ&ಚಿಕ್ಕಬಳ್ಳಾಪುರ ಒಕ್ಕೂಟ ವಿಭಜನೆಯಾಗಿ, ಚಿಕ್ಕಬಳ್ಳಾಪುರ ಒಕ್ಕೂಟ ರಚನೆಯಾಯಿತು. ಎರಡೂ ಒಕ್ಕೂಟಗಳ ನಿರ್ದೇಶಕ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದವು. ಇದಕ್ಕೆ ಪೂರಕವಾಗಿ ಸಹಕಾರ ಸಂಗಳ ಜಂಟಿ ನಿಬಂಧಕರ ಕಚೇರಿ ಅಧಿಕಾರಿಗಳು, ಒಕ್ಕೂಟಕ್ಕೆ ಪತ್ರ ಬರೆದು ಕ್ಷೇತ್ರ ವಿಂಗಡಣೆಯ ಮಾಹಿತಿ ಸಲ್ಲಿಸುವಂತೆ ನ.29ರಂದು ಸೂಚಿಸಿದ್ದರು. ಇದಕ್ಕೆ 30 ದಿನಗಳ ಕಾಲ ಕಾಲಾವಕಾಶ ಸಹ ನೀಡಿರುತ್ತಾರೆ.

ಆದರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಮೂರ್ತಿ ಹಾಗೂ ಅಡ್ಮಿನ್​ ವ್ಯವಸ್ಥಾಪಕ ನಾಗೇಶ್​ ಯಾರ ಗಮನಕ್ಕೂ ತಾರದೆ ಪಟ್ಟಿಯನ್ನು ಸಿದ್ಧಪಡಿಸಿ ಅಂಗೀಕಾರಕ್ಕೆ ಸಹಕಾರ ಇಲಾಖೆ ಜಂಟಿ ನಿಬಂಧಕರ ಕಚೇರಿಗೆ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

ಕೆಲವರ ಅನುಕೂಲಕ್ಕಾಗಿ ವಿಂಗಡಣೆ: ಪಟ್ಟಿಯನ್ನು ಅಂಗೀಕಾರಕ್ಕೆ ಕಳುಹಿಸುವ ಮೊದಲು ಸಾಮಾನ್ಯ ಸಭೆ ಕರೆದು ಅನುಮೋದನೆ ಪಡೆಯಬೇಕು. ಹಾಲು ಸಹಕಾರ ಸಂಗಳಿಂದ ಪ್ರತಿನಿಧಿಗಳ ಗಮನಕ್ಕೆ ತರಬೇಕು, ಆಕ್ಷೇಪಣೆ ಕರೆಯಬೇಕು. ಈ ಯಾವ ಮಾರ್ಗಸೂಚಿ ಪಾಲನೆ ಮಾಡದೆ ಕ್ಷೇತ್ರ ವಿಂಗಣೆ ಮಾಡಿರುವುದು ಒಕ್ಕೂಟದ ಕೆಲ ಮಾಜಿ ನಿರ್ದೇಶಕರು ಹಾಗೂ ಕೆಲ ಸಂಗಳ ಅಧ್ಯಕ್ಷರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಸೋಮವಾರ ಒಕ್ಕೂಟಕ್ಕೆ ಭೇಟಿ ನೀಡಿ ಆಡಳಿತಾಧಿಕಾರಿ ಸಮ್ಮುಖದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕೋಲಾರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳನ್ನು 18ಕ್ಕೆ ನಿಗದಿಪಡಿಸಿದ್ದು, ಆ ಪೈಕಿ ಚುನಾಯಿತ ನಿರ್ದೇಶಕರು 13 ಮಂದಿ ಆಯ್ಕೆಯಾಗಬೇಕಾಗಿದೆ. ಜಿಲ್ಲೆಯಲ್ಲಿ 965 ಸದಸ್ಯ ಹಾಲು ಉತ್ಪಾದಕ ಸಹಕಾರ ಸಂಗಳಿದ್ದು, ಒಕ್ಕೂಟದ ಆಡಳಿತ ಮಂಡಳಿ ಸದಸ್ಯರ ಸಂಖ್ಯೆ ಆಧಾರದ ಮೇರೆಗೆ ಕ್ಷೇತ್ರವಾರು ವಿಂಗಡಣೆ ಮಾಡಿ ಎಲ್ಲ 6 ತಾಲೂಗಳಿಗೂ ಅವಕಾಶ ಮಾಡುವುದು ಸೂಕ್ತ. ಮಹಿಳಾ ಸಂಗಳಿಗೆ 2 ಸ್ಥಾನ, ತಾಲೂಕು ವ್ಯಾಪ್ತಿಯಲ್ಲಿನ ಹಾಲು ಸಹಕಾರ ಸಂಗಳ ತಾಲೂಕುವಾರು, ಹೋಬಳಿವಾರು ಹಾಗೂ ಪಂಚಾಯಿತಿವಾರು ಪಟ್ಟಿ ಸಲ್ಲಿಸಿದ್ದರು. ಇದು ಅವೈಜ್ಞಾನಿಕವಾಗಿದೆ ಎಂದು ಮಾಜಿ ನಿರ್ದೇಶಕರು ದೂರಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್​ ಮೋರೆ ಹೋಗಿದ್ದು ಅಧಿಕಾರಿಗಳ ತೀರ್ಮಾನಕ್ಕೆ ಮುಖಭಂಗವಾಗಿದೆ.

ಆಡಳಿತ ಮಂಡಳಿತೆ 18 ನಿರ್ದೇಶಕರು ಅಗತ್ಯ

ಒಟ್ಟು 18 ನಿರ್ದೇಶಕರ ಪೈಕಿ 13 ಚುನಾಯಿತ ನಿರ್ದೇಶಕರು ಆಯ್ಕೆಯಾಗಬೇಕಾಗಿದೆ. ಉಳಿದ ಸಹಜವಾಗಿ ಸರ್ಕಾರದ ಒಬ್ಬ ನಾಮನಿರ್ದೇಶಕರು, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್​ಡಿಡಿಬಿ) ಪ್ರತಿನಿಧಿ, ಕೆಎಂಎಫ್​ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆಯ ಪ್ರತಿನಿಧಿ ಮತ್ತು ಸಹಕಾರ ಇಲಾಖೆ ಪ್ರತಿನಿಧಿ ನಿರ್ದೇಶಕರಾಗಿರುತ್ತಾರೆ.

ಅಧಿಕಾರಿಗಳ ವರ್ಗಾವಣೆಗೆ ತಡೆಯಾಜ್ಞೆ?

ಕೋಚಿಮುಲ್​ಗೆ ಒಟ್ಟು 685 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 347 ಮಂದಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಕೋಲಾರ ಒಕ್ಕೂಟಕ್ಕೆ 184 ಹಾಗೂ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ 163 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

ಈಗಾಗಲೇ ವರ್ಗಾವಣೆಯಾಗಿರುವ ಕೆಲ ಅಧಿಕಾರಿಗಳು ಕೋರ್ಟ್​ ಮೋರೆ ಹೋಗಿ ವರ್ಗಾವಣೆ ಆದೇಶ ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠವು ಮಂಗಳವಾರ ತಡೆಯಾಜ್ಞೆ ನೀಡಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net